ಮಾನ್ಯರೇ,
ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ, ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲದ `ರಾಹು-ಕೇತು’ಗಳ ಗುಡಿ ಕಟ್ಟಲು ದಾನಕ್ಕೆ ವಿನಂತಿ ಮಾಡಲಾಗಿದೆ. ಇಲ್ಲಿಯವರೆಗೂ ಈ ನಾನ್ ಸೆನ್ಸ್, ಕಾಟ ಕೊಡುವ ದೇವರುಗಳ ಗುಡಿ ಕರ್ನಾಟಕದಲ್ಲಿ ಕಟ್ಟದಿರುವುದಕ್ಕೆ ಕಾರಣ ನಮ್ಮಲ್ಲಿನ್ನೂ ಸಾವಿರಾರು ವರ್ಷಗಳ ಇಂತಹ ಮೌಢ್ಯದಿಂದ ದೂರವಿರುವ, ದೇಹವೇ ದೇವಾಲಯ ಎಂದು ನಂಬಿರುವ ಶರಣ ಕನ್ನಡಿಗರ ಪ್ರಭಾವ ಇರಬೇಕು.
ರಾಹು ಕೇತುಗಳು ಬೆದರಿಕೆಯ ಭ್ರಮಾತ್ಮಕ ಅವೈಜ್ಞಾನಿಕ ಕಲ್ಪನೆ ಅಷ್ಟೇ.! ದಯೆ ಧರ್ಮದ, ದೇವರ ಮೂಲ ಆಗದೆ ಭಯ, ದೇವರ ಧರ್ಮದ ಮೂಲವಾಗಿರುವುದು ಕಾರಣ. ನಮ್ಮ ನಮ್ಮ ದುಷ್ಟ ದುರ್ಗುಣಗಳ, ದುಷ್ಕೃತ್ಯಗಳಿಗೆ ಪ್ರೇರೇಪಿಸುವ ಮನವೇ ರಾಹು ಕೇತು.
ಸದಾಲೋಚನೆ, ಸತ್ಕಾರ್ಯ ಮಾಡಿದವ ಶಿವ, ಹಾಗಿಲ್ಲದವ ಶವ. ಕನ್ನಡಿಗರಲ್ಲಿ ವಿಚಾರ ಶಕ್ತಿ ಇದೆ. ಅದ ಬಳಸಿ ನೀರ ಇಂಗಿಸುವ, ಶಿಕ್ಷಣ, ಆರೋಗ್ಯ, ಗಿಡ ಮರ ನೆಡುವ.. ಇತ್ಯಾದಿ ಸತ್ ಕಾರ್ಯಕ್ರಮಗಳಿಗೆ ದಾನಿಗಳು ದಾನ ನೀಡಲಿ…ಇಂತಾ ಶೋಷಣೆಯ ಪುರೋಹಿತ ಶಾಹಿಯ ಪಡೆಯನ್ನು ಪ್ರೋತ್ಸಾಹಿಸದಿರಲು ಮನವಿ.
ಬಸವಣ್ಣನವರ ವಚನದಂತೆ, ಕಾಲೇ ಕಂಬ, ದೇಹವೇ ದೇಗುಲ, ಶಿರ ಹೊನ್ನ ಕಳಶ, ಎಂದರೆ ನಮ್ಮ ತಂದೆ-ತಾಯಿಗಳಿಂದ ಬಂದಿರುವ ಈ ದೇಹವೇ ದೇವಾಲಯ ಮತ್ತು ಬುದ್ಧಿ, ವೈಚಾರಿಕತೆ, ಮಾನವೀಯತೆ ಇವು ಬಂಗಾರದ ಕಳಸ. ಹಾಗಾಗಿ ನಾವು ವೈಚಾರಿಕ ಮಾನವೀಯ ಮನೋಭಾವ ಬೆಳೆಸಿಕೊಳ್ಳಬೇಕೇ ಹೊರತು, ಗುಡಿ ಕಟ್ಟುವ ಅವೈಚಾರಿಕತೆಗೆ ಬಲಿ ಬೀಳುವುದು ಬೇಡ. ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ ಎನ್ನುವ ರಾಷ್ಟ್ರಕವಿ ಕುವೆಂಪು ಮಾತಿನಂತೆ ಮೌಢ್ಯವನ್ನು ಬಿಟ್ಟು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ.
– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ