`ನಾನು ಯಾರಿಗೂ ಬುಕ್ ಆಗಿರಲಿಲ್ಲ’

`ನಾನು ಯಾರಿಗೂ ಬುಕ್ ಆಗಿರಲಿಲ್ಲ’

ಆಣೆ ಮಾಡಿದ ಜೆಡಿಎಸ್ ಅಭ್ಯರ್ಥಿ ಶಿವಣ್ಣ

ರಾಣೇಬೆನ್ನೂರು, ಮೇ 15- ನನ್ನ ಹೆಂಡತಿ, ಮಕ್ಕಳ ಮೇಲೆ ಆಣೆ ಮಾಡಿ ಹೇಳ್ತೇನೆ ನಾನು ಯಾರಿಗೂ ಬುಕ್ ಆಗಿರಲಿಲ್ಲ ಅಪಪ್ರಚಾರ ಮಾಡಿ ನನಗೆ ಬರುವ 30 ಸಾವಿರ ಮತಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್‌ನವರು ಕಬಳಿಸಿದರು ಎಂದು ಮೊನ್ನಿನ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ  ಜೆಡಿಎಸ್ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ  ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ತಮ್ಮ ಪಕ್ಷದ ಕಾರ್ಯಾಲಯದಲ್ಲಿ ಹೆಂಡತಿ ಶಶಿಕಲಾ, ನಾಲ್ವರು ಮಕ್ಕಳು, ಹಾಗೂ ಪಕ್ಷದ ಮುಖಂಡರ ಜೊತೆಗೂಡಿ ಮಾಧ್ಯಮ ಗೋಷ್ಠಿ ನಡೆಸಿದರು.

`ಕಾಂಗ್ರೆಸ್‌ಗೆ ಬುಕ್ ಆಗಿದ್ದಾನೆ,  ಬೊಮ್ಮಾಯಿ ಅವರಿಂದ ಹೇಳಿಸಿದ್ದೇವೆ ಬಿಜೆಪಿಗೆ ಮತ ನೀಡಿರಿ ಎಂದು ಬಿಜೆಪಿಯವರು, ಬಿಜೆಪಿಗೆ ಬುಕ್ ಆಗಿದ್ದೇನೆ’ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದರು. ನಾನು ಬುಕ್ ಆದದ್ದನ್ನು ಅವರು ಧರ್ಮಸ್ಥಳಕ್ಕೆ ಬಂದು ಮಂಜುನಾಥನ ಎದುರು ಆಣೆ ಮಾಡಲಿ. ನಾನು ನನ್ಮ ಹೆಂಡತಿ, ಮಕ್ಕಳ ಜೊತೆ ಬಂದು ಆಣೆ ಮಾಡುತ್ತೇನೆ ಎಂದು  ಮಂಜುನಾಥ  ಸವಾಲು ಹಾಕಿದರು. 

`ತಾಂತ್ರಿಕ ದೋಷದಿಂದ ನನಗೆ ಬರಲಿದ್ದ ಪಕ್ಷದ ಫಂಡ್ ಬರಲಿಲ್ಲ. ನನ್ನ ಹಿತೈಷಿಗಳು ಕೊಟ್ಟ ಅಲ್ಪ ಪ್ರಮಾಣದ ಹಣ ವಿತರಿಸುತ್ತಿದ್ದಾಗ ನೀನು ಕೊಡುವ ಹಣ ಚಹಾ ಕುಡಿಯಲು ಆಗಲ್ಲ’ ಎನ್ನುವ ಮಾತುಗಳು ಕೇಳಿ ಬಂದವು. ಅವರು ಕೊಟ್ಟಿದ್ದಾದರೂ ನಿಮಗೆ ಎಷ್ಟು ದಿನ ಆಗುತ್ತೆ ? ಎಂದು ಪ್ರಶ್ನಿಸಿ, ನೀವು ನಿಮ್ಮದೇ ಆದ ರೀತಿಯಲ್ಲಿ ದುಡಿದೇ ಊಟ ಮಾಡಬೇಕು. ಕೇವಲ ಹಣ ನೋಡದೆ  ವ್ಯಕ್ತಿಯನ್ನು ನೋಡಬೇಕು ಎಂದು ಮಂಜುನಾಥ ತಮ್ಮ ಅಳಲು ತೋಡಿಕೊಂಡರು. 

ಎರಡು ಚುನಾವಣೆಗಳಲ್ಲೂ ಆಸ್ತಿ ಮಾರಿ ಚುನಾವಣೆ ಮಾಡಿದೆ, ನಾಲ್ಕು ತಿಂಗಳಿಂದ ಜನರ ಬಳಿ ಅಲೆದಾಡಿದೆ. ನನ್ನನ್ನು ನಂಬದೇ ಅಪಪ್ರಚಾರಕ್ಕೆ ಕಿವಿಗೊಟ್ಟಿದ್ದು ನೋವಾಗಿದೆ. ನನ್ನ ಆಸ್ತಿ ಹೋಯಿತು, ಮರ್ಯಾದೆ ಹೋಯಿತು, ನನ್ನ ಶ್ರಮ ಹೋಯಿತು. ನನಗೆ ಸೋಲಿನ ನೋವಿಲ್ಲ.  ನಡೆದ ರಾಜಕೀಯ ಚಟುವಟಿಕೆಗಳು ಬಹಳಷ್ಟು ನೋವುಂಟು ಮಾಡಿವೆ. ಮುಂದೆ ಈ ರೀತಿ ಮಾಡ ಬೇಡಿ ಎಂದು ದುಃಖಭರಿತರಾಗಿ ಮನವಿ ಮಾಡಿದರು.