ಸೋತಿರಬಹುದು ಆದರೆ ಜನರ ಹೃದಯ ಗೆದ್ದಿದ್ದೇನೆ: ರಾಜೇಶ್

ಸೋತಿರಬಹುದು ಆದರೆ ಜನರ ಹೃದಯ ಗೆದ್ದಿದ್ದೇನೆ: ರಾಜೇಶ್

1996 ನೋಟಾ ಮತಗಳು ಚದುರಿಹೊಗಿ ನಾನು ಸೋಲು ಅನುಭವಿಸಬೇಕಾಯಿತು 

– ಎಚ್.ಪಿ. ರಾಜೇಶ್

ಜಗಳೂರು, ಮೇ 14- ನಾನು ಅಂಕಿ-ಅಂಶಗ ಳಿಂದ ಸೋತಿರಬಹುದು. ಆದರೆ ಜನರ ಹೃದಯದಲ್ಲಿ ಗೆದ್ದಿದ್ದೇನೆ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಹೇಳಿದರು. 

ಭಾನುವಾರ ಪಟ್ಟಣದ ಪ್ರೆಸ್‌ ಕ್ಲಬ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿಕೆಟ್ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ನನಗೆ ಜಾತ್ಯತೀತವಾಗಿ ಎಲ್ಲ ಜಾತಿ, ಸಮುದಾಯ, ಜನರು ಮತ ಹಾಕಿದ್ದಾರೆ. ಅವರಿಗೆ ನನ್ನ ಅನಂತ ಕೃತಜ್ಞತೆಗಳು. ಮತ ಹಾಕಿದವರ ಮಧ್ಯೆಯೇ ಇದ್ದು, ನನ್ನ ಅಭಿಮಾನಿಗಳೊಂದಿಗೆ ಸಮಾಜ ಸೇವೆ ಮಾಡುವ ಮೂಲಕವೇ ಕ್ಷೇತ್ರದ ಅಭಿವೃದ್ಧಿಗೆ ಹೋರಾಡುತ್ತೇನೆ.

ಎರಡೂ ರಾಷ್ಟ್ರೀಯ ಪಕ್ಷಗಳ ಮಧ್ಯೆ ಮತದಾರರು ನನಗೆ 49442 ಮತಗಳನ್ನು ನೀಡಿ ಗೆಲುವಿನ ಸನಿಹಕ್ಕೆ ತಂದರು. ಆದರೆ ನನ್ನ ಕ್ರಮ ಸಂಖ್ಯೆ 11, ಅದರ ಕೆಳಗೆ “ನೋಟಾ” ಇದ್ದ ಕಾರಣ ಮತದಾರರು ಗೊಂದಲಕ್ಕೀಡಾಗಿ ನೋಟಾ ಬಟನ್  ಒತ್ತಿದ ಕಾರಣ 1996  ಮತಗಳು ಚದುರಿಹೋದವು. ಹೀಗಾಗಿ ನಾನು ಸೋಲು ಅನುಭವಿಸಬೇಕಾಯಿತು ಎಂದು ರಾಜೇಶ್ ಹತಾಶೆ ವ್ಯಕ್ತಪಡಿಸಿದರು. 

ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಗೆಲ್ಲಬೇಕಾದರೆ ಒಂದು ಪಕ್ಷವನ್ನು ನಾನು ಮತ್ತು ನನ್ನ ಬೆಂಬಲಿಗರು ಸೇರಲೇಬೇಕು. ಮುಂದಿನ ದಿನಗಳಲ್ಲಿ ಬೆಂಬಲಿಗರ ಸಭೆ ಕರೆದು ಚರ್ಚೆ ನಡೆಸಿ ಶೀಘ್ರವೇ  ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

15 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದವನು ನಾನು ಮತ್ತು ನಮ್ಮ ಕಾರ್ಯಕರ್ತರು. ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿರುವೆ. ಆದರೆ ಈಗ ಗೆದ್ದಿರುವ ಶಾಸಕರು ಪಕ್ಷಕ್ಕಾಗಿ ಏನೂ ಮಾಡಿಲ್ಲ ಎಂದು ಟೀಕಿಸಿದರು.

ನನ್ನ ಹಣೆಬರಹದಲ್ಲಿ ಸೋಲು ಬರೆದಿತ್ತು ಎಂದು ಕಾಣುತ್ತದೆ. ಸೋತ ಮಾತ್ರಕ್ಕೆ ಕೈ ಕಟ್ಟಿ ಕೂರುವುದಿಲ್ಲ. ಚುನಾವಣೆಯಲ್ಲಿ ಹಣ ಕೆಲಸ ಮಾಡಿಲ್ಲ. ಎಲ್ಲರಿಗಿಂತ ಹೆಚ್ಚು ಹಣ ಕೊಟ್ಟವರೇ ಸೋತಿದ್ದಾರೆ. ಜನರು ನನ್ನನ್ನು ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೋರಾಡುತ್ತೇನೆ. ನನಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಸವಾಪುರ ರವಿಚಂದ್ರ, ಲೋಕೇಶ್, ಮಾರಣ್ಣ, ರೇವಣ್ಣ  ಅನೇಕರು  ಇದ್ದರು.

error: Content is protected !!