ಪೌರ ಕಾರ್ಮಿಕರ ಮಕ್ಕಳೂ ಸಹ ಉನ್ನತ ಸ್ಥಾನಕ್ಕೆ

ಪೌರ ಕಾರ್ಮಿಕರ ಮಕ್ಕಳೂ ಸಹ ಉನ್ನತ ಸ್ಥಾನಕ್ಕೆ

ಮಲೇಬೆನ್ನೂರಿನ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಶಾಸಕ ಹರೀಶ್‌ ಹರ್ಷ

ಮಲೇಬೆನ್ನೂರು, ಸೆ.30- 1983-84 ರಲ್ಲಿ ನಾನು ದಾವಣಗೆರೆ ನಗರಸಭೆ ಸದಸ್ಯನಾಗಿ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪೌರ ಕಾರ್ಮಿಕರ ಪರಿಸ್ಥಿತಿ ಬಹಳ ಕಷ್ಟಕರವಾಗಿತ್ತು. ಈಗ ಬಹಳ ಸುಧಾರಿಸಿದ್ದು, ಸರ್ಕಾರ ಅಗತ್ಯ ಸೌಲಭ್ಯಗಳನ್ನು ಕಾಲ ಕಾಲಕ್ಕೆ ನೀಡುತ್ತಾ ಬಂದಿದೆ ಎಂದು ಶಾಸಕ ಬಿ.ಪಿ. ಹರೀಶ್‌ ಹೇಳಿದರು.

ಶನಿವಾರ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಪೌರ ಕಾರ್ಮಿಕರ ಮಕ್ಕಳೂ ಕೂಡಾ ವೈದ್ಯರು, ಇಂಜಿನಿಯರ್‌, ಐಎಎಸ್‌ ಮತ್ತು ಕೆಎಎಸ್ ಅಧಿಕಾರಿಗಳಾಗಿರುವುದು ತುಂಬಾ ಸಂತಸ ತಂದಿದೆ ಎಂದರು.

ಅಂದು ಮಲ ಹೊರುವ ಕೆಲಸವನ್ನು ಪೌರ ಕಾರ್ಮಿಕರು ಮಾಡುತ್ತಿದ್ದರು. ಈಗ ಅತ್ಯಾಧುನಿಕ ವ್ಯವಸ್ಥೆಯಿಂದಾಗಿ ಆ ಪದ್ಧತಿ ನಿಂತಿದೆ. ಅಂದಿನ ಪೌರ ಕಾರ್ಮಿಕರಿಗೂ ಮತ್ತು ಇಂದಿನ ಪೌರ ಕಾರ್ಮಿಕರಿಗೂ ಬಹಳಷ್ಟು ವ್ಯತ್ಯಾಸ ಇದೆ.

ಹರಿಹರ ನಗರಸಭೆ ವತಿಯಿಂದ ಈ ಹಿಂದೆ ಮಲ ಹೊರುವ ಕೆಲಸ ಮಾಡಿದ್ದವರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಿದ್ದೇವೆ ಎಂದ ಹರೀಶ್‌ ಅವರು, ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಜೊತೆಗೆ ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡಬೇಕು. 

ಮಕ್ಕಳ ಎದುರು ದುಶ್ಚಟಗಳನ್ನು ಮಾಡ ಬೇಡಿ ಎಂದು ಕಿವಿ ಮಾತು ಹೇಳಿದ ಹರೀಶ್‌, ಮುಂದಿನ ವರ್ಷ ಪೌರ ಕಾರ್ಮಿಕರ ದಿನಾಚರ ಣೆಯನ್ನು ಅದ್ಧೂರಿಯಾಗಿ ಪುರಸಭೆಯ ಹೊಸ ಕಛೇರಿಯಲ್ಲಿ ಮಾಡೋಣ ಎಂದರು.

ನೀರಾವರಿ ಇಲಾಖೆಯ ಆವರಣದಲ್ಲಿ ಪುರಸಭೆ ಕಛೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಕೇಳಿರುವ 2 ಎಕರೆ ಜಾಗವನ್ನು ನೀಡುವ ವಿಷಯವನ್ನು ನೀರಾವರಿ ನಿಗಮದ ಆಡಳಿತ ಮಂಡಳಿ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆಯುವಂತೆ ನೀರಾವರಿ ನಿಗಮದ ಎಂಡಿ ಗೆ ಒತ್ತಾಯ ಮಾಡಿದ್ದೇನೆಂದು ಹರೀಶ್‌ ಈ ವೇಳೆ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್‌ ಅವರು, ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲತ್ತು ಗಳು ಪೌರ ಕಾರ್ಮಿಕರಿಗೆ ಸಿಗುವಂತಾಗಬೇಕು. ಪೌರ ಕಾರ್ಮಿಕರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರಗಳು ಶ್ರಮಿಸುತ್ತಿವೆ ಎಂದರು.

ಮಲೇಬೆನ್ನೂರು ಪುರಸಭೆ ಆಗಿ 8 ವರ್ಷ ಕಳೆದಿದ್ದರೂ ಸುಸಜ್ಜಿತ ಕಛೇರಿ ಸಂಕೀರ್ಣ ಇಲ್ಲದ ಕಾರಣ ಸಭೆ-ಸಮಾರಂಭ ಮಾಡು ವುದು ಕಷ್ಟವಾಗಿದ್ದು, ಶಾಸಕರು ಆದಷ್ಟು ಬೇಗ ನೀರಾವರಿ ನಿಗಮದಿಂದ 2 ಎಕರೆ ಜಾಗ ಮಂಜೂರು ಮಾಡಿಸುವಂತೆ ಕೋರಿದರು.

ತುಂಗಭದ್ರಾ ನದಿಯಿಂದ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ ಕೇಂದ್ರ ಸರ್ಕಾರದ ಅಮೃತ 2.0 ಯೋಜನೆ ಯಡಿ 64.63 ಕೋಟಿ ರೂ.ಗಳಿಗೆ ಆಡಳಿತಾ ತ್ಮಕ ಅನುಮೋದನೆ ಸಿಕ್ಕಿದೆ. 30 ಲಕ್ಷ ರೂ. ಸಾಮರ್ಥ್ಯದ 3 ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಿ, ಪ್ರತಿ ಮನೆಗೂ ನಳ ಸಂಪರ್ಕ ದೊಂದಿಗೆ ನೀರು ಪೂರೈಸುವ ಯೋಜನೆ ಇದಾಗಿದೆ ಎಂದು ಸುರೇಶ್‌ ತಿಳಿಸಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಸರ್ಕಾರ ನೀಡಿದ ಪ್ರತಿಯೊಬ್ಬ ನೌಕರನಿಗೂ 7 ಸಾವಿರ ರೂ. ಬೋನಸ್‌ ವಿತರಿಸಲಾಯಿತು.

ಉಪ ತಹಶೀಲ್ದಾರ್‌ ಆರ್‌ ರವಿ, ಪುರಸಭೆ ಸದಸ್ಯರಾದ ನಯಾಜ್‌, ದಾದಾಪೀರ್‌, ಸಾಬೀರ್‌ ಅಲಿ, ಯುಸೂಫ್‌, ಬಿ. ಸುರೇಶ್‌, ಗೌಡ್ರ ಮಂಜಣ್ಣ, ಭೋವಿಕುಮಾರ್‌, ಕೆ.ಜಿ. ಲೋಕೇಶ್‌, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಖಿಜರ್‌ವುಲ್ಲಾ, ಉಪಾಧ್ಯಕ್ಷ ಹಾಲೇಶ್‌ ಮಾತನಾಡಿದರು.

ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್‌, ಖಲೀಲ್‌ ಶಬ್ಬೀರ್‌ ಖಾನ್, ಷಾ ಅಬ್ರಾರ್‌, ಬಿ. ಮಂಜುನಾಥ್‌, ಕೆ.ಪಿ. ಗಂಗಾಧರ್‌, ಪಿ.ಆರ್‌. ರಾಜು, ಓ.ಜಿ. ಕುಮಾರ್‌, ಜಿಗಳೇರ ಹಾಲೇಶಪ್ಪ, ಟಿ. ಹನುಮಂತಪ್ಪ, ಅಂಗವಿಕಲರ ಸಂಘದ ಮುದೇಗೌಡ್ರ ತಿಪ್ಪೇಶ್‌, ಪುರಸಭೆ ಅಧಿಕಾರಿಗಳಾದ ದಿನಕರ್‌, ಉಮೇಶ್‌, ನವೀನ್‌, ಶಿವರಾಜ್‌ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

error: Content is protected !!