ಹರಪನಹಳ್ಳಿ, ಜು. 8 – ಹರಪನಹಳ್ಳಿ ವಲಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಅತಿಕ್ರಮಣ ತಡೆಯಲು ಹೋದ ಅರಣ್ಯ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ನಾಲ್ವರು ಆರೋಪಿಗಳಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಪಟ್ಟಣದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಲಯ ಆದೇಶಿಸಿದೆ.
ಹರಪನಹಳ್ಳಿ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ ಜಿತ್ತಿನಕಟ್ಟೆ ಕಾಯ್ದಿಟ್ಟ ಅರಣ್ಯ ಪ್ರದೇಶದ ಯಡಿಹಳ್ಳಿ ಸ.ನಂ.253ರ ಅರಣ್ಯ ಪ್ರದೇಶದಲ್ಲಿ ದಿನಾಂಕ 21.05.2021 ರಂದು ಬೆಂಡಿಗೇರಿ ಸಣ್ಣ ತಾಂಡಾದ ಈಶ್ವರನಾಯ್ಕ್, ಸಂಜುನಾಯ್ಕ್, ಹಾಲ್ಯನಾಯ್ಕ್, ನಾಗರಾಜ ಎಂಬ ಅಪರಾಧಿಗಳು ಅರಣ್ಯ ಪ್ರದೇಶದಲ್ಲಿ ಅತಿಕ್ರಮಣ ಮಾಡುವ ವೇಳೆ ಅರಣ್ಯ ಸಿಬ್ಬಂದಿಗಳಾದ ಕಂಡೆಪ್ಪರ ಚಿಕ್ಕಪ್ಪ, ಕಂಚಿಕೇರಿ ಗಸ್ತು ಅರಣ್ಯಪಾಲಕ ಕ್ಷೇಮಾಭಿವೃದ್ಧಿ ನೌಕರ ಎಂ.ಅಂಜಿನಪ್ಪ, ಕ್ಷೇಮಾಭಿವೃದ್ಧಿ ನೌಕರ ಇಪ್ತೇಕಾರ್ ಸಲೀಂ ಹಾಗೂ ಇತರೆ ಸಿಬ್ಬಂದಿಗಳು ಅತಿಕ್ರಮಣ ತಡೆಯಲು ಹೋದಾಗ ಆರೋಪಿತರು ಅರಣ್ಯ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ.
ಪ್ರಕರಣದ ವಿಚಾರಣೆ ನಡೆಸಿದ ಪಟ್ಟಣದ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಲಯ ಸದರಿ ಆರೋಪಿಗಳ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.