ಅಜ್ಞಾನ, ಆಲಸ್ಯಗಳ ನಿವಾರಣೆ ಅಧ್ಯಯನ ಆತ್ಮವಿಶ್ವಾಸದಿಂದ ಸಾಧ್ಯ

ಅಜ್ಞಾನ, ಆಲಸ್ಯಗಳ ನಿವಾರಣೆ ಅಧ್ಯಯನ ಆತ್ಮವಿಶ್ವಾಸದಿಂದ ಸಾಧ್ಯ

ಸಹಕಾರ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿ ಹೆಚ್.ಬಿ.ಮಂಜುನಾಥ್

ಹರಪನಹಳ್ಳಿ, ಮೇ 30- ಕೈಗೊಂಡ ಕಾರ್ಯದ ಬಗ್ಗೆ ಜ್ಞಾನವಿಲ್ಲದಿದ್ದಲ್ಲಿ ಆಸಕ್ತಿ ಉಂಟಾಗುವುದಿಲ್ಲ, ನಿರಾಸಕ್ತಿಯು ಆಲಸ್ಯಕ್ಕೆ ಕಾರಣವಾಗುತ್ತದೆ, ಆಲಸ್ಯದಿಂದಾಗಿ ಸಮಯ ನಿರ್ವಹಣೆಯೂ ವಿಫಲವಾಗುವುದಲ್ಲದೇ ಮಾನಸಿಕ ಒತ್ತಡ ಉಂಟಾಗುತ್ತದೆ. ಅಜ್ಞಾನ ಮತ್ತು ಆಲಸ್ಯದ ನಿವಾರಣೆಗೆ ಅಧ್ಯಯನ ಹಾಗೂ ಆತ್ಮವಿಶ್ವಾಸಗಳೇ ಮದ್ದು ಎಂದು ಹಿರಿಯ ಪತ್ರಕರ್ತ, ಸಹಕಾರ ಸಂಪನ್ಮೂಲ ವ್ಯಕ್ತಿ ಹೆಚ್.ಬಿ.ಮಂಜುನಾಥ್ ಅಭಿಪ್ರಾಯಪಟ್ಟರು.

ಇಲ್ಲಿನ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಒಕ್ಕೂಟ ನಿಯಮಿತ ಇದರ ಸಭಾಂಗಣದಲ್ಲಿ ಹರಪನಹಳ್ಳಿ ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಏರ್ಪಾಡಾಗಿದ್ದ ಒಂದು ದಿನದ ವಿಶೇಷ ತರಬೇತಿ ಶಿಬಿರದ ಪ್ರಧಾನ ಉಪನ್ಯಾಸಕರಾಗಿ `ಒತ್ತಡ ನಿರ್ವಹಣೆ, ಸಮಯ ನಿರ್ವಹಣೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ’ ವಿಷಯವಾಗಿ ಅವರು ಮಾತನಾಡಿದರು.

ಹೈನುಗಾರಿಕೆಯು ಕೃಷಿಯ ಪ್ರಧಾನ ಉಪಕಸುಬಾಗಿದ್ದು, 1950 ಹೊತ್ತಿಗೆ ವಾರ್ಷಿಕ ಕೇವಲ 17 ಮಿಲಿಯನ್ ಟನ್‌ನಷ್ಟಿದ್ದ ನಮ್ಮ ದೇಶದ ಒಟ್ಟು ಹಾಲಿನ ಉತ್ಪಾದನೆ ಪ್ರಸ್ತುತ ಸುಮಾರು 210 ಮಿಲಿಯನ್ ಟನ್‌ನಷ್ಟು ಏರಿಕೆಯಾಗಿದ್ದು, ಜಗತ್ತಿನ ಒಟ್ಟು ಹಾಲು ಉತ್ಪಾದನೆಯ ಶೇ.23 ಕ್ಕಿಂತ ಹೆಚ್ಚು ಭಾರತದಲ್ಲಿ ಆಗುತ್ತಿದೆ. 

ಕರ್ನಾಟಕದಲ್ಲಿ ಪ್ರತಿನಿತ್ಯ ಸುಮಾರು ಒಂದು ಕೋಟಿ ಎಂಟು ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆ ಆಗುತ್ತಿದ್ದು, ಕೆಎಂಎಫ್ ಪ್ರತಿನಿತ್ಯ ಸುಮಾರು 90 ಲಕ್ಷ ಲೀಟರ್‌ನಷ್ಟು ಹಾಲನ್ನು ಸಂಗ್ರಹಿಸಿ, ಸಂಸ್ಕರಿಸುತ್ತಿತ್ತು. ಪ್ರಪಂಚದ ಸುಮಾರು 60 ದೇಶಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುವಷ್ಟು ಸಾಮರ್ಥ್ಯವನ್ನು  ನಮ್ಮ ಕೆಎಂಎಫ್ ಹೊಂದಿದೆ ಎಂದರೆ ಈ ಕ್ಷೇತ್ರದಲ್ಲಿರುವವರ ಆಸಕ್ತಿ ಹಾಗೂ ಆತ್ಮವಿಶ್ವಾಸವೂ ಕಾರಣವಾಗಿದ್ದು, ಹಾಲು ಎಂಬುವ ದ್ರವವು ತೊಟ್ಟಿಲಿನ ಪೂರ್ವದಿಂದ ಸಮಾಧಿಯ ನಂತರದವರೆಗಿನ ಎಲ್ಲಾ ಹಂತಗಳಲ್ಲೂ ಅಗತ್ಯವಾದ ಪದಾರ್ಥವಾಗಿದ್ದು, ಹೈನುಗಾರಿಕೆಯು ಕೇವಲ ಹಣ ಸಂಪಾದನೆಗಷ್ಟೇ ಅಲ್ಲ ಪುಣ್ಯ ಸಂಪಾದನೆಗೂ ಕಾರಣವಾಗಿದೆ ಮಂಜುನಾಥ್ ಹೇಳಿದರು.

ಯಾವುದೇ ನೈಸರ್ಗಿಕ, ಪ್ರಾಕೃತಿಕ ಸಂಪನ್ಮೂಲಗಳಿಗೂ ಮೌಲ್ಯ ಬರುವುದು ಅವು ಬಳಕೆಯಾದಾಗ ಮಾತ್ರ, ಹಾಗೆ ಬಳಕೆಗೆ ಯೋಗ್ಯ ಮಾಡಿ ಕೊಡುವುದೇ ಮಾನವ ಸಂಪನ್ಮೂಲವಾಗಿದ್ದು ಮಾನವ ಸಂಪನ್ಮೂಲದ ಅಭಿವೃದ್ಧಿಯು ಸಮಾಜದ ಅಭಿವೃದ್ಧಿಗೆ ಅತ್ಯವಶ್ಯ ಎಂದರು. 

ಪ್ರತಿನಿತ್ಯ  ದೈನಂದಿನ ಚಟುವಟಿಕೆಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅದರಲ್ಲಿ ಅತ್ಯಗತ್ಯ, ಕಡ್ಡಾಯ, ಮುಖ್ಯ, ಅಮುಖ್ಯ ಎಂಬ ವಿಂಗಡಣೆಗಳನ್ನು  ಮಾಡಿಕೊಂಡು ಸಮಯ ಮೀಸಲಿಟ್ಟು ಕಾರ್ಯಗೈದಲ್ಲಿ ಒತ್ತಡವೂ ಇರುವುದಿಲ್ಲ, ಮಾನವ ಸಂಪನ್ಮೂಲವೂ  ವ್ಯರ್ಥವಾಗುವುದಿಲ್ಲ ಎಂಬುದನ್ನು ನಿದರ್ಶನಗಳ ಸಹಿತ ಮಂಜುನಾಥ್ ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಹೆಚ್.ಮರುಳಸಿದ್ದಪ್ಪ, ನಮ್ಮ ದೇಶದ ಕ್ಷೀರಕ್ರಾಂತಿಯಿಂದಾಗಿ ಹಳ್ಳಿಯಿಂದ ಪಟ್ಟಣಗಳಿಗೆ ಹಾಲಿನ ಹೊಳೆ ಹರಿಯಲು, ಪಟ್ಟಣಗಳಿಂದ ಹಳ್ಳಿಗಳಿಗೆ ಹಣದ ಹೊಳೆ ಹರಿಯಲು ಕಾರಣವಾಯಿತು ಎಂದರು. 

ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‌  ನಿರ್ದೇಶಕ ಗಿಡ್ಡಳ್ಳಿ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೂನಿಯನ್‌ ನಿರ್ದೇಶಕ ಡಿ.ಹೆಚ್.ರಾಮಣ್ಣ, ವಿಸ್ತರಣಾಧಿಕಾರಿ ಪರಮೇಶ್ವರಪ್ಪ, ಸಮಾಲೋಚಕ ವಿಜಯ ಕುಮಾರ್, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನಾಗರಾಜ, ವ್ಯವಸ್ಥಾಪಕ ಎಂ ಬಸವ ರಾಜ್, ಸಿಬ್ಬಂದಿಗಳಾದ ಶ್ರೀನಿವಾಸ್, ಗುರುಬಸವ ರಾಜ ಮುಂತಾದವರು ಉಪಸ್ಥಿತರಿದ್ದರು. ಅನೂರಾಧ ಕ್ಯಾರಕಟ್ಟೆ ಪ್ರಾರ್ಥನಾ ಗೀತೆ ಹಾಡಿದರು.

error: Content is protected !!