ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ಕೈಜೋಡಿಸಬೇಕು : ಶಾಸಕಿ ಎಂ.ಪಿ. ಲತಾ

ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ಕೈಜೋಡಿಸಬೇಕು : ಶಾಸಕಿ ಎಂ.ಪಿ. ಲತಾ

ಹರಪನಹಳ್ಳಿ, ಮೇ 25- ತಾಲ್ಲೂಕಿನಲ್ಲಿ ವಸತಿ ನಿಲಯಗಳಿಗೆ ಸ್ಥಳಾವಕಾಶದ ಕೊರತೆ, ಸಾರಿಗೆ ಸಮಸ್ಯೆ ಸೇರಿದಂತೆ, ಅನೇಕ ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿ ನಲ್ಲಿ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಶಾಸಕರಾದ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಕರೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ರಾಜೀವ್‌ ಗಾಂಧಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಇಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಬೇರೆ ಬೇರೆ ಕೆಲಸದ ನಿಮಿತ್ತ ತಮ್ಮ ಕಛೇರಿಗಳಿಗೆ ಬಂದಂತಹ ಸಾರ್ವಜನಿಕರಿಗೆ ಪ್ರೀತಿಯನ್ನು ತೋರಿಸಿ, ಅವರನ್ನು ಕೂಡಿಸಿ, ಸೌಜನ್ಯದಿಂದ ಮಾತನಾಡಬೇಕು. ಅವರ ಜೊತೆ ಅಗೌರವದಿಂದ ಮಾತನಾಡಬೇಡಿ ಎಂದು ನೌಕರರಿಗೆ ಕಿವಿಮಾತು ಹೇಳಿದರು.

ಆಡಳಿತದ ಬಗ್ಗೆ ನಾನು ಇನ್ನು ತಿಳಿದುಕೊಳ್ಳಬೇಕಿದೆ. ಕ್ಷೇತ್ರದ ಜನರ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದೇನೆ. ಸತ್ಯ, ನಿಷ್ಠೆಯಿಂದ ಕೆಲಸ ಮಾಡಿ. ಹಿಂದೆ ನೀವು ಏನು ಮಾಡಿದ್ದೀರಾ ಎನ್ನುವುದು ಬೇಕಾಗಿಲ್ಲ. ಆ ಬಗ್ಗೆ ಕೇಳುವುದಿಲ್ಲ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ. ನಿಮ್ಮ ಸಹಕಾರ ಎಷ್ಟು ಸಿಗುತ್ತದೆಯೋ ಅಷ್ಟೊಂದು ಅಭಿವೃದ್ಧಿ ಮಾಡುತ್ತೇನೆ ಎಂದರು.

ಸರ್ಕಾರದ ಮಟ್ಟದಲ್ಲಿ ನಾನು ಹೆಚ್ಚಿನ ಅನುದಾನವನ್ನು ಹರಪನಹಳ್ಳಿಗೆ ತರಲು ಬಯಸುತ್ತೇನೆ. ನಾನು-ನೀವು ಎಲ್ಲರೂ ಸೇರಿ ಕುಟುಂಬದ ರೀತಿಯಲ್ಲಿ ಪಟ್ಟಣದ ಅಭಿವೃದ್ಧಿ ಕೆಲಸಗಳನ್ನು ಮಾಡೋಣ ಎಂದು ತಿಳಿಸಿದರು.

ಮುಂದಿನ ಎರಡು, ಮೂರು ದಿನಗಳಲ್ಲಿ ಮತ್ತೊಂದು ವಿವಿಧ  ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸುತ್ತೇನೆ. ಅಂದು ತಾವು ಬರುವಾಗ ತಮ್ಮ ಇಲಾಖೆಗಳ ಕುಂದು-ಕೊರತೆಗಳನ್ನು ಪಟ್ಟಿ ಮಾಡಿಕೊಂಡು ಬರಬೇಕು ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಮಾಡುವ ಮೂಲಕ ಹರಪನಹಳ್ಳಿಗೆ ಉತ್ತಮ ಹೆಸರು ಬರಲು ನಾವೆಲ್ಲರೂ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ಶಿವಕುಮಾರ ಬಿರಾದಾರ, ತಾಪಂ ಇಓ ಕೆ.ಆರ್. ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ರೇಣುಕಾದೇವಿ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಯರಾಜ್,  ಇಸಿಓ ಕಬೀರನಾಯ್ಕ ಸೇರಿದಂತೆ ವಿವಿಧ ಇಲಾಖೆಯ ಮುಖ್ಯಸ್ಥರು ಹಾಜರಿದ್ದು, ಶಾಸಕರಿಗೆ ಅಭಿನಂದಿಸಿದರು.

error: Content is protected !!