ಹೊನ್ನಾಳಿ, ಸೆ.3- ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮಿಗಳ ಮಾರ್ಗದರ್ಶನದಂತೆ ತಾಲ್ಲೂಕಿನ ಅನೇಕ ರೈತ ಬಣಗಳ ರೈತ ಮುಖಂಡರುಗಳು ಹಾಗೂ ಪದಾಧಿಕಾರಿಗಳು ಸೇರಿ ಒಂದೇ ರೈತ ಸಂಘ ರಚನೆಗೆ ಮುಂದಾಗಿರುವುದಾಗಿ ರೈತ ಮುಖಂಡ ಕುಂದೂರು ಹನುಮಂತಪ್ಪ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ನಡೆದ ಹೊನ್ನಾಳಿ ಕೃಷಿ ಮೇಳದ ಪೂರ್ವಭಾವಿ ಸಭೆಯಲ್ಲಿ ಹಿರೇಕಲ್ಮಠದ ಶ್ರೀಗಳು ಎಲ್ಲಾ ರೈತ ಸಂಘಗಳು ಒಮ್ಮತದಿಂದ ಒಂದು ಸದೃಢ ರೈತ ಸಂಘ ರಚನೆಯಾಗಿ ಕೃಷಿಮೇಳದ ಯಶಸ್ಸಿಗೆ ಮುಂದಾಗಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಒಮ್ಮತದಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಅಂದು ಅಧ್ಯಕ್ಷರು ಸೇರಿದಂತೆ, ಕೆಲವೇ ಪದಾಧಿಕಾರಿಗಳ ರಚನೆಯಾಗಿದ್ದು, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಸಮಿತಿ ರಚನೆಗೊಂಡು ಸ್ವಾಮೀಜಿಗಳ ಬಳಿ ತೆರಳುವುದಾಗಿ ಹೇಳಿದರು. ಹೊನ್ನಾಳಿ ತಾಲ್ಲೂಕು ನೂತನ ರೈತ ಸಂಘದ ಅಧ್ಯಕ್ಷರಾಗಿ ಅರಬಗಟ್ಟೆ ಕೆ.ಸಿ. ಬಸಪ್ಪ ಮಾಸ್ಟರ್, ಗೌರವಾಧ್ಯಕ್ಷ ಹಿರೇಮಠದ ಬಸವರಾಜಪ್ಪ, ಕಾರ್ಯಾಧ್ಯಕ್ಷರಾಗಿ ಸಾಸ್ವೆಹಳ್ಳಿ ಬಸವರಾಜಪ್ಪ, ಸಲಹಾ ಸಮಿತಿ ಅಧ್ಯಕ್ಷ ಹಿರೇಗೋಣಿಗೆರೆ ಕುಬೇರಪ್ಪ ನೇಮಕಗೊಂಡರು.
ರೈತ ಮುಖಂಡರಾದ ಬಿದರಗಡ್ಡೆ ಡಿ.ಕೆ. ಭರಮಪ್ಪ, ಮಾಚೇನಳ್ಳಿ ಎಂ.ಪಿ. ಕರಿಬಸಪ್ಪಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿ. ಮುರಿಗೆಪ್ಪ, ಅರಬಗಟ್ಟೆ ಬಸವನಗೌಡ, ಬಸವನಹಳ್ಳಿ ಆನಂದಪ್ಪ, ನಾರಾಯಣ ಸ್ವಾಮಿ, ಗೋಪಗೊಂಡನಹಳ್ಳಿ ಕೃಷ್ಣಾನಾಯ್ಕ, ಮಾದೇನಹಳ್ಳಿ ಶಿವಪ್ಪ, ನ್ಯಾಮತಿ ಮಲ್ಲಿಕಣ್ಣ, ಬೆಳಗುತ್ತಿ ಉಮೇಶಣ್ಣ ಉಪಸ್ಥಿತರಿದ್ದರು.