ತರಳಬಾಳು ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ವೈ.ವೃಷಭೇಂದ್ರಪ್ಪ ಕಳವಳ
ದಾವಣಗೆರೆ, ಅ. 31- ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಹೆಚ್ಚಾದಂತೆ ಸಂಸ್ಕೃತಿ, ಸಂಸ್ಕಾರವೂ ನಶಿಸುತ್ತಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ವೈ.ವೃಷಭೇಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ನಗರದ ತರಳಬಾಳು ಕ್ಷೇಮಾಭಿವೃದ್ಧಿ ಬಳಗದ ವತಿಯಿಂದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ತರಳಬಾಳು ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಅವಿದ್ಯಾವಂತರು ಹೆಚ್ಚಾಗಿದ್ದರೂ ಸಂಸ್ಕೃತಿ, ಸಂಸ್ಕಾರಕ್ಕೆ ಬರವಿರುತ್ತಿರಲಿಲ್ಲ. ಊರಿಗೆ ಯಾರೇ ಹೊಸಬರು ಬಂದರೂ ಉತ್ತಮ ಆತಿಥ್ಯ ದೊರೆಯುತ್ತಿತ್ತು. ಇಂದು ಶೇ.75ರಷ್ಟು ವಿದ್ಯಾವಂತರಿದ್ದರೂ ಸಂಸ್ಕಾರ ಮರೆಯಾಗಿದೆ ಎಂದರು.
ತರಳಬಾಳು ಬೃಹನ್ಮಠದ ಲಿಂ.ಜಗದ್ಗುರು ಶಿವಕುಮಾರ ಸ್ವಾಮೀಜಿಯವರು ಕೊಡುವ ಪ್ರವೃತ್ತಿಯನ್ನು ಸಮಾಜಕ್ಕೆ ಕಲಿಸಿಕೊಟ್ಟರು. ತರಳಬಾಳು ನಿಧಿ ಸಂಗ್ರಹಿಸುವಾಗ ಮಹಿಳೆಯರೇ ಹೆಚ್ಚು ಹಣ ನೀಡುತ್ತಿದ್ದರು ಎಂದು ವೃಷಭೇಂದ್ರಪ್ಪ ನೆನಪಿಸಿಕೊಂಡರು.
ಮಹಿಳೆಯರು, ಬಡವರ ಹಿತ ದೃಷ್ಟಿಯಿಂದ ಶ್ರೀಗಳು ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ ಇಂದು ಅನೇಕ ಮಹಿಳೆಯರು ವೈದ್ಯರು, ಇಂಜಿನಿಯರ್‌ಗಳಾಗಿ ದ್ದಾರೆ. ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾ ಯ್ತಿಯಲ್ಲಿ ಅಧಿಕಾರ ಹಿಡಿದಿದ್ದಾರೆ ಎಂದರು.
ಕೋವಿಡ್-19 ವೈರಸ್ ನಿಂದ ನಗರದಲ್ಲೂ ಅನೇಕ ಸಾವುಗಳು ಸಂಭವಿಸಿದವು. ಸೋಂಕು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ನಾವು ಅದನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕಾದರೆ ಶುದ್ಧ ಗಾಳಿ ಸೇವಿಸಬೇಕು. ಪ್ರತಿ ದಿನ ವಾಯುವಿಹಾರ ಮುಂತಾದ ದೈಹಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಶಾಲಾ ವಾತಾವರಣದಲ್ಲಿನ ಕಲಿಕೆಗೆ ಸಮನಾದದ್ದು ಯಾವುದೂ ಇಲ್ಲ
ಶಿಕ್ಷಕ-ವಿದ್ಯಾರ್ಥಿ ಕಲಿಕೆ ಮಹತ್ವದ್ದು. ಶಾಲಾ ವಾತಾವರಣದಲ್ಲಿನ ಕಲಿಕೆಗೆ ಸಮಾನಾದದ್ದು ಯಾವುದೂ ಇಲ್ಲ ಎಂದು ವೈ.ವೃಷಭೇಂದ್ರಪ್ಪ ಹೇಳಿದರು.
ಇತ್ತೀಚೆಗೆ ಶಾಲಾ ಆರಂಭದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಪ್ರಸ್ತುತ ದಿನಗಳಲ್ಲಿ ಒಂದು ಅಥವಾ ಎರಡು ಮಕ್ಕಳನ್ನು ಹೊಂದುವ ಪೋಷಕರು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಜೊತೆಗೆ ಆರೋಗ್ಯದ ಬಗ್ಗೆ ಚಿಂತೆಯನ್ನೂ ಮಾಡುತ್ತಾರೆ.
ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಬದುಕು ರೂಪಿಸಿಕೊಳ್ಳಬೇಕಿದೆ. ಶಾಲೆಗಳು ಆರಂಭವಾದರೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಅನಗತ್ಯವಾಗಿ ಸ್ನೇಹಿತರೊಡನೆ ಬೆರೆಯುವುದನ್ನು ಇನ್ನೂ ಕೆಲ ದಿನಗಳ ಮಟ್ಟಿಗೆ ಮುಂದೂಡಬೇಕು ಎಂದು ಸಲಹೆ ನೀಡಿದರು.
ಶಿವ ರೈಸ್ ಮಿಲ್ ಮಾಲೀಕ ದಾಗಿನಕಟ್ಟೆ ನಾಗರಾಜಪ್ಪ ಮಾತನಾಡುತ್ತಾ, ವಿದ್ಯಾರ್ಥಿಗಳು ಯಾವ ವಿಷಯ ಆಯ್ದುಕೊಂಡರೂ, ಆಳವಾದ ಅಧ್ಯಯನ ಮಾಡಿದಾಗ ಯಶಸ್ಸು ಪಡೆಯಲು ಸಾಧ್ಯ ಎಂದರು.
ಸಹಕಾರ ಸಂಘಗಳ ಅಪರ ನಿಬಂಧಕರೂ, ಸಹಕಾರ ಚುನವಣಾ ಆಯೋಗದ ಕಾರ್ಯದರ್ಶಿಗಳೂ ಆದ ಬಿ.ಹೆಚ್. ಮಂಜಪ್ಪ ಬಿದರಗಡ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಿವೃತ್ತ ಡಿವೈಎಸ್ಪಿ ಹೆಚ್.ಕೆ. ರೇವಣ್ಣ, ನಿವೃತ್ತ ಸಹ ಪ್ರಾಧ್ಯಾಪಕ ಡಾ.ಶಿವಾನಂದ, ತರಳಬಾಳು ಕ್ಷೇಮಾಭಿವೃದ್ಧಿ ಬಳಗದ ಕಾರ್ಯದರ್ಶಿ ಡಿ.ಎಂ. ಶಿವಕುಮಾರ್ ಉಪಸ್ಥಿತರಿದ್ದರು. ಬಳಗದ ಅಧ್ಯಕ್ಷ ಆರ್.ಶಿವಕುಮಾರಸ್ವಾಮಿ ಕುರ್ಕಿ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸ್ವರ್ಣಗೌರಿ ಕುರ್ಕಿ ಪ್ರಾರ್ಥಿಸಿದರು. ರಂಗೇಶಿ ಓಬಳಾಪುರ ವಂದಿಸಿದರು.