ಸಂತೇಬೆನ್ನೂರು, ಡಿ. 27 – ದಣಿವರಿಯದ ಕನ್ನಡ ಪರಿಚಾರಕ ಕೆ.ಸಿದ್ದಲಿಂಗಪ್ಪ. 86 ರ ಇಳಿ ವಯಸ್ಸಿನಲ್ಲೂ ಕನ್ನಡ ನಾಡು, ನುಡಿ ಬಗ್ಗೆ ಅಪಾರ ಕಾಳಜಿ. ಕನ್ನಡದ ಕೆಲಸಗಳಿಗೆ ಉತ್ಸಾಹದ ಚಿಲುಮೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಕ್ರೀಡೆ, ಕಲೆ, ಸಂಸ್ಕೃತಿ, ಇತಿಹಾಸ ಸಂರಕ್ಷಣೆಗೆ ಪ್ರಾಮಾಣಿಕವಾಗಿ ದುಡಿದಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿ ಮೂರು ದಶಕಗಳಿಗೂ ಅಧಿಕ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಸಂತೇಬೆನ್ನೂರಿನ ಎಸ್ ಎಸ್ ಜೆವಿಪಿ ಸರ್ಕಾರಿ ಪ್ರೌಢಶಾಲೆಯಲ್ಲಿಯೇ 1997 ರಲ್ಲಿ ನಿವೃತ್ತರಾಗಿದ್ದಾರೆ. ಗ್ರಾಮದಲ್ಲಿ ಯುವಕರಿದ್ದಾಗಲೇ ಸತ್ಯನಾರಾಯಣ ನಾಡಿಗ್ ಮಾರ್ಗದರ್ಶನದಲ್ಲಿ 1960 ರಲ್ಲೇ ವಿಜಯ ಸಮೂಹ ಶಿಕ್ಷಣ ಸಂಸ್ಥೆ ಆರಂಭಿಸಿ ಸಂಸ್ಥಾಪಕ ಕಾರ್ಯದರ್ಶಿಯಾಗಿ ಇಂದಿಗೂ ಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸುತ್ತಿದ್ದಾರೆ.
ಅನೇಕ ಕವನ, ಲೇಖನ ಬರೆದರೂ ಪುಸ್ತಕ ರೂಪದಲ್ಲಿ ತರಲು ಮುಂದಾ ಗಿಲ್ಲ. ಕವಿಗೋಷ್ಠಿ, ಆಕಾಶವಾಣಿ, ದೂರದರ್ಶನ ಕವಿತೆ ವಾಚನ ಮಾಡಿದ್ದಾರೆ. ಸ್ಥಳೀಯ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಇವರ ಕನ್ನಡ ಸೇವೆ ಗುರುತಿಸಿ ‘ವಿಜಯ ಯುವಕ ಸಂಘ ಪ್ರಕಟಿಸಿರುವ ‘ಕನ್ನಡ ಪರಿಚಾರಕರು’ ಎಂಬ ಪುಸ್ತಕದಲ್ಲಿ ಲೇಖನ ಬರೆದಿದ್ದಾರೆ. ಕನ್ನಡ ಸೇವೆಯನ್ನು ಅನೇಕ ಅಭಿಮಾನಿಗಳು ಲೇಖನದ ಮೂಲಕ ಗುಣಗಾನ ಮಾಡಿದ್ದಾರೆ.
ಕನ್ನಡವೇ ನನ್ನ ಉಸಿರು ಎಂಬ ಸಾಕ್ಷಿ ಪ್ರಜ್ಞೆಯಲ್ಲಿ ‘ಒಬ್ಬ ಕನ್ನಡಿಗ ಒಂದು ರೂಪಾಯಿ’ ದೇಣಿಗೆ ಸಂಗ್ರಹಿಸಿ ಸಾಹಿತ್ಯ ಪರಿಷತ್ತಿಗೆ ನೀಡಿದ್ದಾರೆ. ತಾಲ್ಲೂಕಿನಾದ್ಯಂತ ಸುತ್ತಾಡಿ ನೂರಾರು ಆಜೀವ ಸದಸ್ಯರನ್ನು ನೊಂದಾಯಿಸಿದ್ದಾರೆ.20 ರಿಂದ 30 ದತ್ತಿ ಸ್ಥಾಪನೆಗೆ ಕಾರಣರಾಗಿದ್ದಾರೆ. ಚನ್ನಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸತತ ಕನ್ನಡ ಕಾರ್ಯಕ್ರಮಗಳನ್ನು ನಿಯೋಜಿಸಿದ್ದಾರೆ. ಇಂದಿಗೂ ಕನ್ನಡದಲ್ಲಿಯೇ ಪತ್ರ ವ್ಯವಹಾರ ನಡೆಸುವ ಪರಿಪಾಠ ಇದೆ.
ಅನೇಕ ಏಕಾಂಕ ಹಾಗೂ ವೃತ್ತಿ ರಂಗಭೂಮಿಯಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 12 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿ ನಡಸಿದ್ದಾರೆ. ನಾಡಿನ ಹಿರಿಯ, ಕಿರಿಯ
ಸಾಹಿತಿಗಳು ಆಹ್ವಾನಿಸುವ ಮೂಲಕ ಪರಿಚಯಿಸಿದ್ದಾರೆ. ಎಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳನ್ನು ತಪ್ಪದೇ ಗ್ರಹಿಸಿದ್ದಾರೆ. ಕನ್ನಡ ವಿರೋಧಿ ಚಟುವಟಿಕೆಗಳನ್ನು ನಿರ್ಭೀತಿಯಿಂದ ಖಂಡಿಸಿದ್ದಾರೆ.
ಚನ್ನಗಿರಿ ತಾಲ್ಲೂಕು ಶಿವಮೊಗ್ಗ ಜಿಲ್ಲೆಗೆ ಸೇರಿದ್ದಾಗ 1997 ರಲ್ಲಿ ಜಿಲ್ಲಾ ಉತ್ತಮ ಪ್ರಶಸ್ತಿ, ದಾವಣಗೆರೆ ಜಿಲ್ಲಾ ಗ್ರಾಮೀಣ ಸಿರಿ ಪ್ರಶಸ್ತಿ, 2024 ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.