ನಗರದಲ್ಲಿ ನಾಳೆ ಬಿಜೆಪಿಯ ಗ್ರಾಮ ಸ್ವರಾಜ್ಯ ಸಮಾವೇಶ : ಸಿದ್ದೇಶ್ವರ

ನಗರದಲ್ಲಿ ನಾಳೆ ಬಿಜೆಪಿಯ ಗ್ರಾಮ ಸ್ವರಾಜ್ಯ ಸಮಾವೇಶ : ಸಿದ್ದೇಶ್ವರ - Janathavaniದಾವಣಗೆರೆ, ಜ. 2 – ಬಿಜೆಪಿ ವತಿಯಿಂದ ಹಮ್ಮಿ ಕೊಳ್ಳಲಾಗಿರುವ ಗ್ರಾಮ ಸ್ವರಾಜ್ಯ ಯಾತ್ರೆಯ ಅಂಗವಾಗಿ  ನಾಡಿದ್ದು ದಿನಾಂಕ 4ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರದ ಜಿಎಂಐಟಿ ಕಾಲೇಜಿನ ಆವರಣದಲ್ಲಿ ಸಮಾವೇಶ ನೆರವೇರಲಿದೆ. 

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಸಂಸದ ಜಿ.ಎಂ. ಸಿದ್ದೇಶ್ವರ, ಗ್ರಾಮ ಸ್ವರಾಜ್ಯ ಯಾತ್ರೆಯ  ತಂಡದಲ್ಲಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಮಾಧುಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾ ವಳಿ, ಸಂಸದರಾದ ಬಿ.ವೈ. ರಾಘ ವೇಂದ್ರ, ನಾರಾಯಣಸ್ವಾಮಿ, ಟಿ.ಎಸ್.ಬಸವರಾಜ್, ಯಾತ್ರೆಯ ಸಂಚಾಲಕರಾದ ತುಳಸಿ ಮುನಿರಾಜು ಗೌಡ, ವ್ಯವಸ್ಥಾ ಪ್ರಮುಖ್ ವಿವೇಕಾನಂದ ಡಬ್ಬಿ, ದಾವಣಗೆರೆ ವಿಭಾಗದ ಪ್ರಭಾರಿ ಜಿ.ಎಂ.ಸುರೇಶ ಅವರಿದ್ದಾರೆ ಎಂದು ಹೇಳಿದ್ದಾರೆ.  

ಸಮಾವೇಶದ ದಿನದಂದು ಬಿಜೆಪಿ ಯುವ ಮೋರ್ಚಾದಿಂದ ಬೈಕ್ ರಾಲಿ ನಗರ ದೇವತೆ ದುರ್ಗಾಂಬಿಕಾ ದೇವಾಲಯದಿಂದ ಹೊರಡಲಿದೆ. ಮಹಿಳಾ ಮೋರ್ಚಾದಿಂದ ಪೂರ್ಣಕುಂಭ ಸ್ವಾಗತ ಕಾರ್ಯಕ್ರಮವಿದೆ ಎಂದವರು ತಿಳಿಸಿದರು. 

ಜಿಲ್ಲೆಯವರೇ ಸಚಿವರಾಗಲಿ

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಜಿಲ್ಲೆಯವರೇ ಆಗಬೇಕು ಅನ್ನುವುದು ನನ್ನ ಅಭಿಲಾಷೆ ಯಾಗಿದೆ. ಜಿಲ್ಲೆಯ ಯಾರಿಗೇ ಸಚಿವ ಸ್ಥಾನ ಕೊಟ್ಟರೂ ನನಗೆ ಸಂತೋಷ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.  

ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾ ಚಾರ್ಯ ಸೇರಿದಂತೆ, ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಸಚಿವ ಸ್ಥಾನ ಯಾರಿಗೆ ಕೊಡಬೇಕು ಎಂಬುವುದು ಮುಖ್ಯಮಂತ್ರಿಗಳ ಪರಮಾಧಿಕಾರ ಎಂದರು. 

ಕೇಂದ್ರದಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಇದೇ ವೇಳೆ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಂಸದರು, ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದೇನೆ. ಸಂಸದನಾಗಿಯೇ ಇದ್ದರೆ ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚು ಗಮನ ಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಜಾಗದಲ್ಲಿ ಯಾರೇ ಕಟ್ಟಡ ಕಟ್ಟಿದ್ದರೂ, ಮಹಾನಗರ ಪಾಲಿಕೆಯವರು ಅದನ್ನು ತೆರವುಗೊಳಿಸಬೇಕಾಗುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಫುಟ್‍ಪಾತ್ ಅತಿಕ್ರಮಿಸಿಕೊಂಡಿರುವ ಅಂಗಡಿ-ಮುಂಗಟ್ಟುಗಳನ್ನೂ ತೆರವುಗೊಳಿಸಲಾಗುವುದು ಎಂದವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮ ಗಾಂಧಿಯವರು ಹಳ್ಳಿಗಳ ಏಳಿಗೆಗೆ ಕನಸು ಕಂಡಿದ್ದರು. ಆದರೆ, 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಆ ಬಗ್ಗೆ ಗಮನ ಹರಿಸಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ನೇರ ಅನುದಾನ ಸಿಗುವಂತೆ ಮಾಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು 14 ಮತ್ತು 15ನೇ ಹಣಕಾಸು ಆಯೋಗದ ಹಣವನ್ನು ಗ್ರಾಪಂಗಳಿಗೆ ಬಿಡುಗಡೆ ಮಾಡಿದ್ದಾರೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸು ಸಾಕಾರಗೊಳಿಸುವ ಉದ್ದೇಶ ಬಿಜೆಪಿಯ ಕಾರ್ಯಕ್ರಮದ್ದಾಗಿದೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಕಾರ್ಯದರ್ಶಿ ಬಿ.ಎಸ್.ಜಗದೀಶ್,  ವಕ್ತಾರ ಡಿ.ಎಸ್. ಶಿವಶಂಕರ್ ಮತ್ತಿತರರಿದ್ದರು. 

error: Content is protected !!