ಕನ್ನಡಕಬ್ಬ-ಉಗಾದಿಹಬ್ಬ ಉಪನ್ಯಾಸದಲ್ಲಿ ಲೋಕೇಶ್ ಅಗಸನಕಟ್ಟೆ
ದಾವಣಗೆರೆ, ನ.3- ಕವಿತೆ ಎಂದರೇನು? ಅದನ್ನು ಯಾಕೆ ಬರೆಯಬೇಕು? ಹೇಗೆ ಬರೆಯಬೇಕು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಾಗ ಆತ್ಮಾನುಸಂಧಾನದ ಬ್ರಹ್ಮಾನಂದ ಸಹೋದರ ಈ ಕವಿತೆ, ಒಂದು ಸಾಲಿನ ಕೆಳಗೆ ಮತ್ತೊಂದು ಸಾಲನ್ನು ಬರೆದು ಆ ಪದಗಳ ಒಳಗೆ ಇರುವ ಪದಾರ್ಥವನ್ನು ನಾವು ಕವಿತೆಯೆಂದು ಹೇಳಬಹುದು.
ಕೇವಲ ಪದಗಳ ಜೋಡಣೆಯ ಚಮತ್ಕಾರದಿಂದ ನೇರ ಸಮ್ಮೋಹನ ಮಾಡುವಾಗ, ಆಗುವ ಅನುಭವದ ಚಿತ್ರ ಹೇಳುವುದು ಕವಿತೆಯಲ್ಲ, ಆ ಪದಗಳ ಒಳಗಿರುವ ಅನುಭಾವವನ್ನು ದರ್ಶನ ಮಾಡಿಸುವುದು ಕವಿತೆಯೆಂದು ಖ್ಯಾತ ಕವಿ ಮತ್ತು ವಿಮರ್ಶಕರಾದ ಡಾ.ಲೋಕೇಶ್ ಅಗಸನಕಟ್ಟೆ ಅವರು ತಿಳಿಸಿದರು.
ಗ್ರಂಥ ಸರಸ್ವತಿ ಪ್ರತಿಭಾ ರಂಗವು ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಅಂತರ್ಜಾಲ ಕನ್ನಡಕಬ್ಬ-ಉಗಾದಿಹಬ್ಬ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಕವಿತೆಯ ಹುಟ್ಟು ಮತ್ತು ಬೆಳವಣಿಗೆಯು ಓದುಗನಲ್ಲಿ ಮಾಡುವ ಪರಿಣಾಮ ಕುರಿತು ವಿವರಿಸಿದರು.
ದೊಡ್ಡ ಸಂಘ-ಸಂಸ್ಥೆಗಳು ಸರ್ಕಾರ ಮಾಡಬೇಕಾದ ಇಂತಹ ಕಾರ್ಯಕ್ರಮ ಗಳನ್ನು ಒಬ್ಬ ವ್ಯಕ್ತಿ ತನ್ನ ಕುಟುಂಬದ ಜೊತೆ ಸೇರಿ ಮಾಡುತ್ತಿರುವುದು ಕನ್ನಡಿಗರಾದ ನಮ್ಮೆ ಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಮಧ್ಯ ಕರ್ನಾಟಕದ ಪ್ರಸಿದ್ಧ ನಗರಿ ದಾವಣಗೆರೆ ಯಲ್ಲಿ ಇರುವ ಗ್ರಂಥ ಸರಸ್ವತಿ ಪ್ರತಿಭಾ ರಂಗ ಎಂಬ ಸಂಸ್ಥೆ ಅದ್ಭುತ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ಅವಿರತವಾಗಿ ಮಾಡಿಕೊಂಡು ಬರುತ್ತಿದೆ.
ಕೊರೊನಾ ಕಾರಣದಿಂದ ನಿಂತಿದ್ದ ಈ ಕಾರ್ಯಕ್ರಮವನ್ನು ಶಿವಕುಮಾರಸ್ವಾಮಿ ಕುರ್ಕಿಯವರು ಛಲಬಿಡದೇ ಜನರಿಗೆ ತಲುಪಿಸುವ ಸಲುವಾಗಿ ಅಂತರ್ಜಾಲದಲ್ಲಿ ಈ ಕಾರ್ಯಕ್ರಮವನ್ನು ಮುಂದಿನ 30 ದಿನಗಳ ಕಾಲ ನಡೆಸಿಕೊಡುವ ಮೂಲಕ 6 ಕೋಟಿ ಕನ್ನಡಿಗರ ಮನೆ ಮತ್ತು ಮನಗಳನ್ನು ತಲುಪಲು ಉತ್ತಮ ಕಾರ್ಯಕ್ರಮವನ್ನು ರೂಪಿಸಿದ್ದಾರೆ.
ಅದರ ಮೊದಲ ದಿನದ ಕಾರ್ಯಕ್ರಮದ ಉಪನ್ಯಾಸವನ್ನು ಡಾ. ಲೋಕೇಶ್ ಅಗಸನಕಟ್ಟೆ ಖ್ಯಾತ ಕವಿಗಳು ಮತ್ತು ವಿಮರ್ಶಕರು ಇವರು ನಡೆಸಿಕೊಟ್ಟರು.
65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅವರು ನೀಡಿದ ಉಪನ್ಯಾಸದಲ್ಲಿ ಕಾವ್ಯದ ದಿಕ್ಕು-ದೆಸೆಯ ಬಗ್ಗೆ ಮಾತನಾಡಿದರು.
ಶ್ರೀಯುತರು ಕವಿತೆ ಎಂದರೇನು? ಕವಿತೆ ಯಾರಿಗೆ, ಯಾಕೆ ಮತ್ತು ಯಾವಾಗ ಹುಟ್ಟಬೇಕು ಎಂಬುದನ್ನು ವಿವರವಾಗಿ ತಿಳಿಸಿದರು. ಪಂಪನಿಂದ ಹಿಡಿದು ಬೇಂದ್ರೆಯವರೆಗಿನ ಕವಿಗಳ ಅನುಭವ ಮತ್ತು ಅನುಭಾವದ ಬಗ್ಗೆ ಪ್ರಸ್ತಾಪಿಸಿದರು.
ಕವಿತೆ ಹೇಗಿರಬೇಕು ಎಂಬುದನ್ನು ಬೇಂದ್ರೆಯವರ ಭೃಂಗದ ಬೆನ್ನೇರಿ ಕವಿತೆಯ ಮೂಲಕ ವಿವರಿಸಿದರು. ಆನಂದ ಮತ್ತು ಸಂತೋಷಗಳು ಮನುಷ್ಯರಿಗೆ ಮಾತ್ರವಲ್ಲ. ಪ್ರಕೃತಿಗೂ ಇದೆ ಎಂಬುದನ್ನು ತಿಳಿಸಿದರು. ಬುದ್ಧ ಅಲ್ಲಮರನ್ನು ಪ್ರಸ್ತಾಪಿಸಿದ ಅವರು, ಶಬ್ದದೊಳಗಿನ ನಿಶ್ಯಬ್ದದ ಬಗ್ಗೆ ಹೇಳಿದರು.
ಕೊನೆಯದಾಗಿ ಈಗಿನ ಕವಿಗಳು ಮತ್ತು ಕವಿತೆಗಳ ಬಗ್ಗೆ ಮಾತನಾಡಿದ ಅವರು, ಈಗ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಇದು ಖುಷಿಯ ವಿಚಾರವೇ ಆದರೂ ಅವು ಜನರ ಮನಸ್ಸಿನಲ್ಲಿ ಉಳಿಯದಿರುವುದಕ್ಕೆ ಕಾರಣ ಸ್ವಂತಿಕೆ ಇಲ್ಲದಿರುವುದು ಎಂದು ಹೇಳಿದರು.
ಕವಿ ಲೇಖಕ ಅಥವಾ ಬರಹಗಾರರ ಬದುಕು ಮತ್ತು ಬರಹಕ್ಕೆ ಸಾಮ್ಯತೆ ಇರಬೇಕು ಎಂದು ಹೇಳುವ ಮೂಲಕ ಕವಿಯ ನೈತಿಕತೆಯನ್ನು ಪ್ರಶ್ನಿಸಿದರು.
ಕು|| ಸ್ವರ್ಣಗೌರಿ ಸ್ವಾಗತಿಸಿದರು. ಶ್ರೀಮತಿ ಯಶಾ ದಿನೇಶ್ ಸುಮಧುರವಾಗಿ ಕನ್ನಡ ಗೀತೆಯನ್ನು ಹಾಡಿದರು ಮತ್ತು ಸುಶ್ರಾವ್ಯ ತಂಡದಿಂದ ಹಚ್ಚೇವು ಕನ್ನಡದ ದೀಪ ಹಾಡಲಾಯಿತು.