ಎಐಡಿಎಸ್ಓ ತೀವ್ರ ಆಕ್ರೋಶ
ದಾವಣಗೆರೆ, ಜ.14- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉಳಿಕೆಯಾಗಿರುವ ಹೆಚ್ಚುವರಿ 600 ಕೋಟಿ ಹಣವನ್ನು ಹಿಂಪಡೆಯಲು ಮುಂದಾಗಿರುವ ಸರ್ಕಾರದ ನಡೆಯನ್ನು ಎಐಡಿಎಸ್ಓ ಖಂಡಿಸಿದೆ.
ವಿವಿಯಲ್ಲಿದ್ದ 1000 ಕೋಟಿ ಉಳಿತಾಯದ ನಿಧಿಯಲ್ಲಿ, 400 ಕೋಟಿ ಹಣವನ್ನು ಈಗಾಗಲೇ ರಾಮನಗರದಲ್ಲಿ ವೈದ್ಯ ಕೀಯ ಕಾಲೇಜು ಮತ್ತು ಕ್ಯಾಂಪಸ್ ನಿರ್ಮಾಣಕ್ಕೆ ವರ್ಗಾಯಿಸಿದೆ.
ಸರ್ಕಾರವು ಜನರ ತೆರಿಗೆಯ ಹಣವನ್ನು ಶಿಕ್ಷಣಕ್ಕೆ ವ್ಯಯಿಸುವ ಬದಲಿಗೆ, ಅಫಿಲಿಯೇಷನ್ ಮತ್ತು ಪರೀಕ್ಷಾ ಶುಲ್ಕದ ಮೂಲಕ ವಿದ್ಯಾರ್ಥಿಗಳಿಂದ ಸಂಗ್ರಹವಾದ ಹಣದ ಮೇಲೆ ಕಣ್ಣು ಹಾಕಿರುವುದು ಯಾವ ನ್ಯಾಯ ? ಎಂದು ಎಐಡಿಎಸ್ಓ ಪ್ರಶ್ನಿಸಿದೆ.
ವಿಶ್ವವಿದ್ಯಾನಿಲಯದ ನಿಧಿಯ ಮೇಲೆ ಸರ್ಕಾರ ಯಾವುದೇ ಹಕ್ಕನ್ನು ಹೊಂದಿಲ್ಲ. ಇದು ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ಸರ್ವನಾಶಗೊಳಿಸುವ ಧೋರಣೆ ಆಗಿದೆ ಎಂದು ಕಿಡಿಕಾರಿದೆ.
ಒಂದೆಡೆ ಕೇಂದ್ರ ಬಿಜೆಪಿ ಸರ್ಕಾರವು ಯುಜಿಸಿ ಮೂಲಕ ಕುಲಪತಿಗಳ ನೇಮಕಾತಿಯಲ್ಲಿ ಅಪಾಯಕಾರಿ ಬದಲಾವಣೆ ಜಾರಿಗೊಳಿಸುತ್ತಿದೆ. ಇನ್ನೊಂದೆಡೆ ರಾಜ್ಯ ಕಾಂಗ್ರೆಸ್ ಸರ್ಕಾರವು ವಿಶ್ವವಿದ್ಯಾಲಯದ ನಿಧಿಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ. ಶಿಕ್ಷಣದ ಪ್ರಜಾತಾಂತ್ರಿಕ ಅಡಿಪಾಯವನ್ನೇ ಬುಡಮೇಲು ಮಾಡುವ ಹುನ್ನಾರ ಮತ್ತು ವಿಶ್ವವಿದ್ಯಾಲಯದ ಹಕ್ಕುಗಳನ್ನು ಮೊಟಕುಗೊಳಿಸುವ ಸರ್ಕಾರದ ನಡೆಯ ವಿರುದ್ಧ ಪ್ರಬಲ ಪ್ರತಿರೋಧ ಚಳವಳಿ ಬೆಳೆಸಬೇಕೆಂದು ವಿದ್ಯಾರ್ಥಿ ಸಮೂಹಕ್ಕೆ ಎಐಡಿಎಸ್ಓ ಕರೆ ನೀಡುತ್ತದೆ.