ದಾವಣಗೆರೆ, ನ. 28- ಸಾರ್ವಜನಿಕರು ಹಾಗೂ ಯುವ ಸಮೂಹದಲ್ಲಿ ಸಾಹಿತ್ಯಿಕ ಅಭಿರುಚಿ ಮೂಡಿಸುವುದು, ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ಸ್ವಾಭಿಮಾನಿ ಬಳಗದ ವತಿಯಿಂದ `ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮತ್ತು ಅಭಿವೃದ್ಧಿಗೆ ಮಾರಕ’ ಎಂಬ ವಿಷಯ ಕುರಿತು ಜಿಲ್ಲಾ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸ್ವಾಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದ್ದು, ಸಾರ್ವಜನಿಕರು ಮತ್ತು ಯುವ ಜನಾಂಗದಲ್ಲಿ ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸುವ ಸಲುವಾಗಿ ಸ್ವಾಭಿಮಾನಿ ಬಳಗ ಈ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಸುಮಾರು ಐನೂರರಿಂದ ಸಾವಿರ ಪದಗಲ್ಲಿ ಕನ್ನಡದಲ್ಲಿಯೇ ತಮ್ಮ ಕೈಬರಹದಲ್ಲಿ ಪ್ರಬಂಧ ಬರೆಯಬೇಕು. ಮೂರು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ವಿಂಗಡಿಸಲಾಗಿದೆ ಎಂದರು.
8 ರಿಂದ 12 ನೇ ತರಗತಿಯವರೆಗೆ, ಪದವಿ ಮತ್ತು ಸ್ನಾತಕೋತ್ತರ ಪದವಿ, 25 ರಿಂದ 35 ವರ್ಷ ವಯೋಮಾನದ ನಾಗರಿಕರು, ಗೃಹಿಣಿಯರಿಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮೂರು ವಿಭಾಗಗಳಲ್ಲಿ ಮೊದಲ ಬಹುಮಾನ ತಾಲ 20 ಸಾವಿರ ನಗದು, ಎರಡನೇ ಬಹುಮಾನ ತಲಾ 10 ಸಾವಿರ ಹಾಗೂ ಮೂರನೇ ಬಹುಮಾನ ತಲಾ 5 ಸಾವಿರ ರೂ. ನಗದು, ಸಮಾಧಾನಕರ ಬಹುಮಾನವಾಗಿ ಐದು ನೂರು ಜನರಿಗೆ ಪುಸ್ತಕವನ್ನು ಬಹುಮಾನವನ್ನಾಗಿ ನೀಡಲಾಗುವುದು ಎಂದು ಹೇಳಿದರು.
ಡಿಸೆಂಬರ್ 20 ರೊಳಗಾಗಿ ತಮ್ಮ ಪ್ರಬಂಧಗಳನ್ನು ನಿಜಲಿಂಗಪ್ಪ ಬಡಾವಣೆಯ ವರ್ತುಲ ರಸ್ತೆಯಲ್ಲಿರುವ `ಇನ್ಸೈಟ್ಸ್ ಐಎಎಸ್, ಕೆಎಎಸ್ ತರಬೇತಿ ಕೇಂದ್ರ ಇಲ್ಲಿಗೆ ತಲುಪಿಸಬಹುದು. ವಿವರಕ್ಕೆ ಸಂಪರ್ಕಿಸಿ : 9606388288, 6363682537.
ಪತ್ರಿಕಾಗೋಷ್ಠಿಯಲ್ಲಿ ಸ್ವಾಭಿಮಾನಿ ಬಳಗದ ಶಿವಕುಮಾರ್ ಡಿ. ಶೆಟ್ಟರ್, ಕೆ. ಶಿವಕುಮಾರ್, ಡಿ. ವಿರೂಪಾಕ್ಷಪ್ಪ ಪಂಡಿತ್, ಪುರಂದರ್ ಲೋಕಿಕೆರೆ ಉಪಸ್ಥಿತರಿದ್ದರು.