ದಾವಣಗೆರೆ, ಅ.8- ತನ್ನ ಮನೆಯಲ್ಲೇ ಕಳ್ಳತನ ಮಾಡಿ ಯಾರೋ ಅಪರಿಚಿತರು ಪ್ರಜ್ಞೆ ತಪ್ಪಿಸಿ ನಗದು, ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ಕಳ್ಳತನದ ಕಥೆ ಸೃಷ್ಟಿಸಿ ದೂರು ನೀಡಿದ್ದ ಯುವತಿ ಹಾಗೂ ಕಳ್ಳತನಕ್ಕೆ ಸಹಕರಿಸಿದ್ದವನನ್ನು ಬಂಧಿಸಿರುವ ಚನ್ನಗಿರಿ ಪೊಲೀಸರು 1.27 ಲಕ್ಷ ರೂ. ನಗದು, 9.5 ಲಕ್ಷ ರೂ. ಬೆಲೆಯ 155 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳತನದ ಕಥೆ ಸೃಷ್ಟಿಸಿದ್ದ ಚನ್ನಗಿರಿ ತಾಲ್ಲೂಕಿನ ಅಗರಬನ್ನಿಹಟ್ಟಿ ಗ್ರಾಮದ ತಸ್ಮೀಯಖಾನಂ (26), ಹಾಗೂ ಅವರ ಕುಟುಂಬದ ನಿಕಟವರ್ತಿ ಬೆಂಗಳೂರಿನ ರಾಜಾಜಿನಗರ ನಿವಾಸಿ ಮುಜೀಬುಲ್ಲಾ ಶೇಖ್ ಅಲಿಯಾಸ್ ಜಾಕೀರ್ (42) ಬಂಧಿತರು.
ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಗರಬನ್ನಿಹಟ್ಟಿ ಗ್ರಾಮದ ಅಮಾನುಲ್ಲಾ ಎಂಬುವವರ ಮಗಳು ತಸ್ಮೀಯ ಖಾನಂ ಸೆ.3 0 ರಂದು ತಾನು ಮನೆಯಲ್ಲಿ ಒಬ್ಬಳೇ ಇದ್ದ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ಮನೆಯೊಳಗೆ ಬಂದು ಮುಖಕ್ಕೆ ಬಾಯಿಂದ ಊದಿ, ನಂತರ ನೀರಿನಂತಹ ದ್ರವ ಚಿಮುಕಿಸಿದ್ದರಿಂದ ಪ್ರಜ್ಞೆ ತಪ್ಪಿದಂತಾಗಿದ್ದು, ಕುಟುಂಬದವರು ಬಂದು ಎಬ್ಬಿಸಿದ ನಂತರ ನೋಡಿದಾಗ ಮನೆಯ ಬೀರುವಿನ ಬೀಗ ಮುರಿದು 17 ತೊಲ ಬಂಗಾರದ ಒಡವೆ ಮತ್ತು 1.20 ಲಕ್ಷ ಕಳವು ಮಾಡಿಕೊಂಡು ಹೋಗಿರುವುದಾಗಿ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಕಳ್ಳತನ ನಡೆದ ದಿನವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಆರೋಪಿಗಳ ಪತ್ತೆಗೆ ಸೂಕ್ತ ನಿರ್ದೇಶನ ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಕಳ್ಳತನದ ದೂರು ನೀಡಿದ್ದಂತ ಸ್ವತಃ ತಸ್ಮೀಯ ಖಾನಂ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಹೆಚ್ಚಿನ ವಿಚಾರಣೆ ನಡೆಸಿದಾಗ ಮುಜೀಬುಲ್ಲಾ ಶೇಖ್ ಅಲಿಯಾಸ್ ಜಾಕೀರ್ ಜೊತೆ ಸೇರಿಕೊಂಡು ಕಳ್ಳತನ ಮಾಡಿದ್ದು, ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಸುಳ್ಳು ಕತೆ ಸೃಷ್ಟಿಸಿರುವುದು ವಿಚಾರಣೆ ವೇಳೆ ತಿಳಿಸಿದ್ದಾರೆ. ಮುಜೀಬುಲ್ಲಾ ಮನೆಯಲ್ಲಿಟ್ಟಿದ್ದ ನಗದು ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.