ದಾವಣಗೆರೆ, ಸೆ.30- ಚನ್ನಗಿರಿ ತಾಲ್ಲೂಕು ಸಾರಥಿ ಗ್ರಾಮದ ಮಡಿವಾಳರ ಅಣ್ಣಪ್ಪ ಎಂಬುವವನಿಗೆ ಚಾಕು ಇರಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ನಗರದ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಯರಬಳ್ಳಿ ಉಮಾಪತಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.12 ರಂದು ಅಣ್ಣಪ್ಪ ಎಂದಿನಂತೆ ಕೆಲಸ ಮುಗಿಸಿಕೊಂಡು ತನ್ನ ಸ್ನೇಹಿತ ಸುನೀಲ್ನನ್ನು ಕರೆದುಕೊಂಡು ಹತ್ತಿರದ ಕೆ. ಗಾಣದಕಟ್ಟೆ ಗ್ರಾಮಕ್ಕೆ ಆಳು ಬಟವಾಡಿ ಮಾಡಿ ಬರುವಾಗ, ಅಣ್ಣಪ್ಪನ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ರಾಕೇಶ್ ಎಂಬಾತ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದರು.
ಸಂಘದ ಪದಾಧಿಕಾರಿಗಳಾದ ಕೆ.ಎಚ್. ಗುಡ್ಡಪ್ಪ, ಲೋಕೇಶಪ್ಪ, ಮಹಾಂತೇಶ್, ಹಾಲಸ್ವಾಮಿ, ಮಂಜಪ್ಪ ಸಾರಥಿ, ಮೈಲಾರಪ್ಪ, ನಾಗರಾಜ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.