ವೃತ್ತಿಪರ ಸಾಮಾಜಿಕ ಕಾರ್ಯಕರ್ತರಿಂದ ಪತ್ರ ಚಳುವಳಿ

ದಾವಣಗೆರೆ, ಸೆ.30- ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಮತ್ತು ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಎಂಎಸ್‌ಡಬ್ಲ್ಯೂ ನೌಕರರನ್ನು ಖಾಯಂ ಗೊಳಿಸುವುದೂ ಸೇರಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಪತ್ರ ಚಳುವಳಿ ಮೂಲಕ ಮನವಿ ಮಾಡಲಿದ್ದೇವೆ ಎಂದು ರಾಜ್ಯ ಪ್ರೊಫೇಷನಲ್‌ ಸೋಷಿಯಲ್‌ ವರ್ಕರ್‌ ವೆಲ್‌ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಡಾ. ಎಂ. ಸಂತೋಷ ಕುಮಾರ್‌ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಎಂಎಸ್‌ಡಬ್ಲ್ಯೂ ನೌಕರರಿಗೆ ಖಾಲಿ ಹುದ್ದೆಗಳಿದ್ದರೂ 5-10 ವರ್ಷಗಳಿಂದ ಸರ್ಕಾರ ನೇಮಕಾತಿ ಹೊರಡಿಸಿಲ್ಲ. ನಾವು 15 ವರ್ಷಗ ಳಿಂದ ಜೀತ ಪದ್ದತಿ ಮಾದರಿಯಲ್ಲಿ ದುಡಿಯು ತ್ತಿದ್ದೇವೆ ಎಂದು ಅಳಲು ತೋಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು ಜತೆಗೆ ಯಾವುದೇ ಇಲಾಖೆಯಲ್ಲಾಗಲೀ ಎಂಎಸ್‌ಡಬ್ಲ್ಯೂ ನೌಕರರನ್ನು ವಿವಿಧ ಹುದ್ದೆ ಗಳಿಗೆ ನೇಮಿಸಬೇಕು ಎಂದು ಒತ್ತಾಯಿಸಿದರು.

ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರಿಗೆ ನೀಡುತ್ತಿರುವ ಕೃಪಾಂಕವನ್ನು 2ರಿಂದ 4ಕ್ಕೆ ಏರಿಸಬೇಕು. ಎಂಎಸ್‌ಡಬ್ಲ್ಯೂ ಪದವೀಧರ ನೌಕರರು ಸುಮಾರು ವರ್ಷಗಳಿಂದ  ಕಡಿಮೆ ವೇತನದ ಜತೆಗೆ ಇಎಸ್‌ಐ, ಪಿಎಫ್‌, ವಿಮೆ ಸೌಲಭ್ಯವಿಲ್ಲದೇ ದುಡಿಯುತ್ತಿದ್ದು ಇವರಿಗೆ ವೇತನ ಹೆಚ್ಚಿಸುವ ಜತೆಗೆ ವಿವಿಧ ಸೌಲಭ್ಯ ಕಲ್ಪಿಸಬೇಕು ಎಂದರು.

ಎಂಎಸ್‌ಡಬ್ಲ್ಯೂ ಪದವೀಧರರು ಕಾರ್ಯ ನಿರ್ವಹಿಸುವ ಎಲ್ಲಾ ಹುದ್ದೆಗಳಿಗೂ 25 ಸಾವಿರ ರೂ. ಮೂಲ ವೇತನ ನಿಗದಿ ಪಡಿಸಬೇಕು. ಆರೋಗ್ಯ ಇಲಾಖೆಯಲ್ಲಿನ ಸಿಪಿಎಂ, ಡಿಪಿಎಂ ಸೇರಿದಂತೆ ಬಿಪಿಎಂ ಹುದ್ದೆಗಳಲ್ಲಿ  ಮಾಸ್ಟರ್‌ ಆಫ್‌ ಸೋಶಿಯಲ್‌ ವರ್ಕರ್‌ ಪದವೀಧರರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ನಿನ್ನೆಯಿಂದಲೇ ಈ ಚಳುವಳಿ ಪ್ರಾರಂಭ ಮಾಡಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಂಬಂಧಿಸಿದ ಸಚಿವರಿಗೆ ಪತ್ರ ಚಳುವಳಿಯ ಮೂಲಕ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸುತ್ತೇವೆ. 

ಆದಾಗ್ಯೂ ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ವಿಧಾನ ಸೌಧ ಮುತ್ತಿಗೆ ಹಾಕಲು ಯೋಚಿಸಿದ್ದೇವೆ ಎಂದು ಹೇಳಿದರು.

ಈ ವೇಳೆ ರಾಜ್ಯ ಕಾರ್ಯದರ್ಶಿ ಸಿ. ಚಂದನ್‌ ಕುಮಾರ್‌, ಜಿಲ್ಲಾಧ್ಯಕ್ಷೆ ಪ್ರತಿಭಾ, ಶ್ವೇತಾ, ರಕ್ಷಿತ್‌ ಗೌಡ, ಅಂಜಿನಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!