ದಾವಣಗೆರೆ, ಸೆ. 26- ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣದ ಹಿನ್ನೆಲೆಯಲ್ಲಿ ಬಸಾಪುರ ಗ್ರಾಮದ ಉಮೇಶ ಮತ್ತು ಆತನ ಸ್ನೇಹಿತ ಕೃಷ್ಣ ಇವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು, ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಅವರ ಪೋಷಕರು ಹಾಗೂ ಗ್ರಾಮದ ಮುಖಂಡರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಮೇಶ್ ತಾಯಿ ವಿಶಾಲಮ್ಮ ಅವರು, ಸೆ. 19 ರಂದು ಗಲಭೆ ನಡೆದಾಗ ಉಮೇಶ್ ಮನೆಯಲ್ಲಿದ್ದ.
ಸೆ. 20 ರಂದು ಬೆಳಿಗ್ಗೆ 4 ಗಂಟೆಗೆ ಮೈಸೂರಿಗೆ ಬಾಡಿಗೆ ಇದ್ದು, ಗಾಡಿ ಮಾಲೀಕರ ಬಳಿ ಕಾರು ತರಲು ಹೋಗುತ್ತಿರುವಾಗ ಬಿ.ಟಿ.ಪೆಟ್ರೋಲ್ ಬಂಕ್ ಅಶೋಕ ಟಾಕೀಸ್ ಹಿಂಭಾಗ ಅವರನ್ನು ಮತ್ತು ಆತನ ಸ್ನೇಹಿತ ಕೃಷ್ಣನನ್ನು ತಡೆದು ಸಹಿ ಮಾಡು ಬಾ ಎಂದು ಕರೆದುಕೊಂಡು ಹೋಗಿರುತ್ತಾರೆಂದು ತಿಳಿಸಿದರು.
ನನ್ನ ಮಗ ಟ್ಯಾಕ್ಸಿ ಡ್ರೈವರ್ ಆಗಿದ್ದು. ಅವನ ದುಡಿಮೆಯಿಂದ ನಮ್ಮ ಕುಟುಂಬ ಸಾಗುತ್ತಿದೆ. ದುಡಿಮೆ ಇಲ್ಲದೆ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಯಾವುದೇ ತಪ್ಪು ಮಾಡದ ನನ್ನ ಮಗ ಮತ್ತು ಆತನ ಸ್ನೇಹಿತನನ್ನು ಬಂಧಿಸಿರುತ್ತಾರೆ ಎಂದರು.
ಬಂಧಿತ ಕೃಷ್ಣ ಅವರ ಪೋಷಕರಾದ ಮಂಜುಳ ಮತ್ತು ಮಲ್ಲಿಕಾರ್ಜುನ್ ಮಾತನಾಡಿ, ನಮ್ಮ ಮಗ ಮೈಸೂರಿನಲ್ಲಿ ಕಾರ್ಯಕ್ರಮವಿದ್ದ ಕಾರಣ ಉಮೇಶ್ ಜೊತೆ ಕಾರನ್ನು ತರಲು ಹೋಗಿದ್ದಾಗ ಬಂಧಿಸಲಾಗಿದೆ. ಸಿಕ್ಕ ಸಿಕ್ಕವರನ್ನು ಹಿಡಿದುಕೊಂಡು ಹೋದರೆ, ತಪ್ಪು ಮಾಡದ ಅಮಾಯಕರ ಗತಿಯೇನು. ನಮಗೆ ದಿಕ್ಕೇ ತೋಚುತ್ತಿಲ್ಲ.
ಕೂಡಲೇ ಅಮಾಯಕರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ತಾಂಡಾ ರಕ್ಷಣಾ ವೇದಿಕೆಯ ಮಂಜುನಾಯ್ಕ ಮಾತನಾಡಿ, ಗಣೇಶ ಮೆರವಣಿಗೆ ಗಲಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಆದರೆ ಅಮಾಯಕರನ್ನು ಬಂಧಿಸಿರುವುದು ಸರಿಯಲ್ಲ. ಇದನ್ನು ಪರಿಶೀಲಿಸಿ ಕೂಡಲೇ ಬಿಡುಗಡೆ ಮಾಡಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಮಂಜಮ್ಮ, ಮಲ್ಲೇಶ್, ಬಸಮ್ಮ ಹಾಗೂ ಬಸಾಪುರ ಗ್ರಾಮದ
ಮುಖಂಡರು ಇದ್ದರು.