ದಾವಣಗೆರೆ, ಆ.12- ಮಾಯಕೊಂಡ ಹಾಗೂ ಆನಗೋಡು ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಕ್ಷೇತ್ರ ಮಟ್ಟದ ಮುಸುಕಿನ ಜೋಳ ಬೆಳೆಯ ಚೇತರಿಕೆಗೆ ಲಘು ಪೋಷಕಾಂಶ ಸಿಂಪರಣೆ ಮಾಡಲು ಸಲಹೆ ನೀಡಲಾಗಿದೆ.
ಸಹಾಯಕ ಕೃಷಿ ನಿರ್ದೇಶಕ ಡಿ.ಎಂ. ಶ್ರೀಧರಮೂರ್ತಿ ಮಾತನಾಡಿ, ಅತಿಯಾದ ಮಳೆಯಿಂದಾಗಿ ಬಾಧಿತ ಮೆಕ್ಕೆಜೋಳ ಬೆಳೆಗಳ ಚೇತರಿಕೆಗೆ ಲಘುಪೋಷಕಾಂಶ ದ್ರಾವಣವನ್ನು 2.ಮಿ.ಲೀ ಹಾಗೂ 19 ಆಲ್ಮಿಶ್ರಣ 2 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡುವಂತೆ ರೈತರಿಗೆ ಸಲಹೆ ನೀಡಿದರು. ಆನಗೋಡು ರೈತ ಸಂಪರ್ಕ ಕೇಂದ್ರದಲ್ಲಿ ಆನಗೋಡು ಹೋಬಳಿಯ ಕೃಷಿ ಸಖಿಯರಿಗೆ ಸಿಂಪರಣೆ ಕುರಿತು ತರಬೇತಿ ನೀಡಿ, ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರೈತರಿಗೆ ವ್ಯಾಪಕವಾಗಿ ಮಾಹಿತಿ ನೀಡುವಂತೆ ತಿಳಿಸಿದರು.
ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಲಘುಪೋಷಕಾಂಶ ದ್ರಾವಣವನ್ನು ದಾಸ್ತಾನು ಇರಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆಯಲು ತಿಳಿಸಿದರು.
ಎರಡೂ ಹೋಬಳಿಗಳ ವ್ಯಾಪ್ತಿಯಲ್ಲಿ ತಡವಾಗಿ ಬಿತ್ತನೆ ಮಾಡಿದ ಹಾಗೂ ಅತಿ ಹೆಚ್ಚು ಮಳೆಯಿಂದಾಗಿ ಬಾಧಿತ ಮುಸುಕಿನ ಜೋಳ ಬೆಳೆಗಳನ್ನು ಪರಿಶೀಲಿಸಿ, ನಂತರ ಮಾಯಕೊಂಡ ಗ್ರಾಮದ ಶಿವಾನಂದಪ್ಪ ಇವರ ಜಮೀನಿನ ಮೆಕ್ಕೆಜೋಳದ ತಾಕಿನಲ್ಲಿ ಬೆಳೆಯ ಚೇತರಿಕೆಗಾಗಿ ಲಘುಪೋಷಕಾಂಶ ದ್ರಾವಣ ಹಾಗೂ 19 ಆಲ್ ಸಿಂಪರಣೆ ಮಾಡಿ ಶಿವಪುರ ಹಾಗೂ ಪವಾಡರಂಗವ್ವನಹಳ್ಳಿ ಗ್ರಾಮಗಳಲ್ಲಿ ಮಳೆಯಿಂದ ಬಾಧಿತ ಮೆಕ್ಕೆಜೋಳ ಬೆಳೆಗೆ ಚೇತರಿಕೆಗಾಗಿ ಸಿಂಪರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಯಕೊಂಡ ಹೋಬಳಿಯ ಕೃಷಿ ಸಮಾಜದ ಸದಸ್ಯರಾದ ರುದ್ರೇಶ್, ಕೃಷಿ ಅಧಿಕಾರಿಗಳಾದ ಕೇಶವನಾಯ್ಕ್, ಶ್ರೀನಿವಾಸ್ ಆರ್ ಹಾಗೂ ಇತರೆ ರೈತರುಗಳು ಹಾಜರಿದ್ದರು.