ಎರಡನೆಯ ಮಹಾಯುದ್ಧದ ಅಂತಿಮ ವರ್ಷಗಳು. ಬ್ರಿಟಿಷ್-ಭಾರತದ ಯುದ್ಧ ಮತ್ತು ಸರಬರಾಜು ಇಲಾಖೆಯಲ್ಲಿ ಲಂಚದ ಪ್ರವೃತ್ತಿ ಹೆಚ್ಚುತ್ತಿರುವುದನ್ನು ಗಮನಿಸಿದ ಸರ್ಕಾರ, ಲಂಚ ಕೋರರನ್ನು ನಿಯಂತ್ರಿಸಲು ಮುಂದಾಯಿತು. ಫಲಶೃತಿಯಾಗಿ 1946ರಲ್ಲಿ ಭಾರತೀಯ ತನಿಖಾ ಸಂಸ್ಥೆಯಾದ ಸಿಬಿಐ ಅಸ್ತಿತ್ವಕ್ಕೆ ಬಂದಿತು.
ದೇಶ ಸ್ವಾತಂತ್ರ್ಯದ ಹೊಸ್ತಿಲಿಗೆ ಬಂದು ನಿಂತಿತ್ತು. ಅಧಿಕಾರ ಹಸ್ತಾಂತರಿಸಿ ಬ್ರಿಟೀಷರು ಭಾರತದಿಂದ ನಿರ್ಗಮಿಸಿದರು. ಸ್ವಾತಂತ್ರ್ಯದ ಸಂಭ್ರಮ ಬಹುಕಾಲ ಉಳಿಯಲಿಲ್ಲ. ಪಂಜಾಬಿನ ಮುಖ್ಯಮಂತ್ರಿ ಕೈರಾನ್ ಸಿಂಗ್ ಲಂಚದ ಆರೋಪ ಬೆಳಕಿಗೆ ಬಂತು. ಆ ಸಂದರ್ಭದಲ್ಲಿ ಸರ್ಕಾರದ ಇಲಾಖೆಗಳಲ್ಲಿ ಲಂಚದ ಹಾವಳಿಯನ್ನು ತಡೆಯುವ ಬಗ್ಗೆ ಅನೇಕ ಚರ್ಚೆಗಳು ನಡೆದವು. ಸಮಿತಿಗಳು ರಚನೆಯಾಗಿ ವರದಿ ನೀಡಿದವು. ಸರ್ಕಾರ ಈ ಬಗ್ಗೆ ಗಮನಹರಿಸಲೇ ಬೇಕಾಯಿತು. ಹಲವಾರು ಕಾನೂನುಗಳನ್ನು ರಚಿಸಬೇಕಾಯಿತು. ಸಂಸ್ಥೆಗಳನ್ನು ಕಾನೂನು ಅಡಿಯಲ್ಲಿ ಹುಟ್ಟು ಹಾಕಬೇಕಾಯಿತು.
2013ರಲ್ಲಿ ಭಾರತದ ಸಂಸತ್ತು ಲೋಕಪಾಲ್ ಮತ್ತು ಲೋಕಾಯುಕ್ತ ಮಸೂದೆಯನ್ನು ಅಂಗೀಕರಿಸಿತು. ಸರ್ಕಾರದ ವ್ಯವಸ್ಥೆಯಲ್ಲಿ ಲಂಚದ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಕೇಂದ್ರದ ಮಟ್ಟದಲ್ಲಿ ಲೋಕಪಾಲ್ ಸಂಸ್ಥೆ ಮತ್ತು ರಾಜ್ಯಗಳ ಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸುವುದು ಈ ಕಾನೂನಿನ ಉದ್ದೇಶವಾಯಿತು. ಸದರಿ ಕಾಯಿದೆಯು ಮೂರು ಭಾಗಗಳಿದ್ದು 63 ಕಲಂಗಳನ್ನು ಹೊಂದಿದೆ. ಇವುಗಳಲ್ಲಿ ಸಂಸ್ಥೆಯ ಅಂಗರಚನೆ, ಲೋಕಪಾಲ್ ಅಧ್ಯಕ್ಷರು ಮತ್ತು ಸದಸ್ಯರ ನೇಮಕ, ಕಾರ್ಯನಿರ್ವಹಣೆ, ವಿಚಾರಣಾ ವಿಭಾಗ, ಅಭಿಯೋಜನಾ ವಿಭಾಗ, ಕಚೇರಿ ಸಿಬ್ಬಂದಿ ನೇಮಕಾತಿ ಇತ್ಯಾದಿ ವಿವರಗಳಿವೆ. ಈ ಸಂಸ್ಥೆಯು ಪ್ರತಿವರ್ಷ ವಾರ್ಷಿಕ ವರದಿಯನ್ನು ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಸುತ್ತದೆ.
ನಗರಕ್ಕೆ ಇಂದು ಲೋಕಪಾಲ್ ನ್ಯಾ. ಎಲ್. ನಾರಾಯಣ ಸ್ವಾಮಿ
ಭಾರತದ ಲೋಕಪಾಲ್ ನ್ಯಾಯಾಂಗ ಸದಸ್ಯರಾದ ನ್ಯಾ. ಎಲ್. ನಾರಾಯಣ ಸ್ವಾಮಿ ಅವರು ವಕೀಲರ ಸಾಂಸ್ಕೃತಿಕ ಭವನದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ವಕೀಲರ ಸಂಘ ಆಯೋಜಿಸಿರುವ ನೂತನ ಕಾಯ್ದೆಗಳ ಕುರಿತ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸುವರು.
ನಂತರ ಮಧ್ಯಾಹ್ನ 3 ಗಂಟೆಗೆ ಆರ್.ಎಲ್ ಕಾನೂನು ಕಾಲೇಜಿನಲ್ಲಿ ಆಯೋಜಿಸಿರುವ `ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ -2013′ ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಲೋಕಪಾಲ್ ಸಂಸ್ಥೆಯ ಕಚೇರಿಯು ನವದೆಹಲಿಯ ಮಹಿಪಾಲ್‍ಪುರದ ವಸಂತ ಕುಂಜ್, ಪ್ಲಾಟ್‍ನಂಬರ್ 6ರಲ್ಲಿ ಕಾರ್ಯನಿರ್ವ ಹಿಸುತ್ತದೆ. ಇದು ತನ್ನದೇ ಆದ ಅಂತರ್ಜಾಲವನ್ನು ಹೊಂದಿದ್ದು, ಆಸಕ್ತರು lokpal.gov.in ಸಂಪರ್ಕಿಸಿ ವಿವರ ಪಡೆಯಬಹುದಾಗಿದೆ.
ಲೋಕಪಾಲ್ ಸಂಸ್ಥೆಯಲ್ಲಿ ಅಧ್ಯಕ್ಷರೂ ಸೇರಿ ದಂತೆ 10 ಜನ ಸದಸ್ಯರಿರುತ್ತಾರೆ. ಈಗಿನ ಅಧ್ಯಕ್ಷ ರಾಗಿ ಸುಪ್ರೀಂ ಕೋರ್ಟ್‍ನ ವಿಶ್ರಾಂತ ನ್ಯಾಯ ಮೂರ್ತಿ ಅಜಯ್‍ಮಾಣಿಕ್‍ರಾವ್ ಖಾನ್‍ವಿ ಲ್ಕರ್ ಕಾರ್ಯ ನಿರ್ವಹಿಸುತ್ತಿದ್ದಾರೆ..ಸಂಸ್ಥೆಯ ನ್ಯಾಯಾಂಗ ಸದಸ್ಯರಾಗಿ ಇತ್ತೀಚೆಗೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯ ಮೂರ್ತಿಯಾ ಗಿದ್ದು, ಹಿಮಾಚಲ ಪ್ರದೇಶದ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಾಗಿ ನಿವೃತ್ತರಾದ ನ್ಯಾ. ಎಲ್. ನಾರಾಯಣ ಸ್ವಾಮಿ ಮತ್ತು ನ್ಯಾಯಮೂರ್ತಿ ಋತುರಾಜ್ ಅವಸ್ಥಿ, ನ್ಯಾಯಮೂರ್ತಿ ಸಂಜಯ್ ಯಾದವ್ ನೇಮಕ ಗೊಂಡಿರುತ್ತಾರೆ. ಸಂಸ್ಥೆಯ ಇತರೆ ಸದಸ್ಯರುಗಳಾಗಿ ಸುಶೀಲ್ ಚಂದ್ರ, ಅಜಯ್ ತೈರ್ಕೆ, ಪ್ರತಾಪ್ ಕುಮಾರ್ ತ್ರಿಪಾಠಿ ಕಾರ್ಯನಿರ್ವಹಿಸುತ್ತಿದ್ದಾರೆ.ಲೋಕಪಾಲರು ನೇಮಕಗೊಂಡಾಗ ಭಾರತದ ರಾಷ್ಟ್ರಪತಿಯವರು ಅವರಿಗೆ ಪ್ರಮಾಣ ವಚನವನ್ನು ಬೊದಿಸುತ್ತಾರೆ.
ಲೋಕಪಾಲ್ ತನ್ನದೇ ಆದ ಲಾಂಛನವನ್ನು ಹೊಂದಿದೆ. ಲಾಂಛನದ ಅಡಿಯಲ್ಲಿ ಈಗ ಉಪನಿಷತ್ತಿ ನಿಂದ ಆರಿಸಿದ ಶ್ಲೋಕದ ಒಂದು ಭಾಗವನ್ನು ಅಳವಡಿಸಿಕೊಳ್ಳಲಾಗಿದೆ. `ಕಿಸಿ ಕಾ ಧನ್ ಕಾ ಮೋಹ್ ಮತ್ ಕರೋ’ ಎಂಬ ಹಿಂದೀ ಅವತರಣಿಕೆಯ ಇಂಗ್ಲಿಷ್ ಭಾಷಾಂತರ ಹೀಗಿದೆ `Do Not cover the wealth of others’. ಸಂಸ್ಥೆಯು ವಾರ್ಷಿಕ ಸರಾಸರಿ 2500 ದೂರುಗಳ ನ್ನು ಸ್ವೀಕರಿಸುತ್ತದೆ ಎಂದು ವಾರ್ಷಿಕ ವರದಿಯಿಂದ ಕಂಡು ಬರುತ್ತದೆ. ಕೇಂದ್ರ ಕಚೇರಿಯಲ್ಲಿ ಒಟ್ಟು 124 ವಿವಿಧ ದರ್ಜೆಯ ಹುದ್ದೆಗಳಿರುವುದೂ ಸಹ ವರದಿಯಲ್ಲಿ ವ್ಯಕ್ತವಾಗಿದೆ.
– ಎಲ್.ಎಚ್. ಅರುಣಕುಮಾರ್, ಅಧ್ಯಕ್ಷರು, ಜಿಲ್ಲಾ ವಕೀಲರ ಸಂಘ, ದಾವಣಗೆರೆ.