ದಾವಣಗೆರೆ, ಜೂ. 12 – ಫೈವ್ ಸ್ಟಾರ್ ಹೋಟೆಲ್ನಲ್ಲಿ ಕುಳಿತು ಕಾರ್ಯಕರ್ತರನ್ನು ದಬಾಯಿಸುವ ರಣದೀಪ್ಸಿಂಗ್ ಸುರ್ಜೆವಾಲಾ ಅವರಿಂದಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದಕ್ಕೆ ಕಾರಣವಾಯಿತು ಎಂದು ಕೆಪಿಸಿಸಿ ಸದಸ್ಯ ಹೆಚ್. ದುಗ್ಗಪ್ಪ ಆರೋಪಿಸಿದ್ದಾರೆ.
ಕಳೆದ 10 ವರ್ಷಗಳಿಂದ ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರವಿಲ್ಲದೇ ನರೇಂದ್ರ ಮೋದಿಯವರ ಹವಾದಲ್ಲಿ ಸೋತಿದ್ದ ಕಾಂಗ್ರೆಸ್ಗೆ ರಾಹುಲ್ ಗಾಂಧಿಯವರು ಹಗಲಿರುಳು ಎನ್ನದೇ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ಭಾರತ್ ಜೋಡೋ ಯಾತ್ರೆ ಕೈಗೊಂಡು ಪಕ್ಷಕ್ಕೆ ಸಂಜೀವಿನಿ ನೀಡಿದ್ದ ಪರಿಣಾಮವಾಗಿ ಕಾಂಗ್ರೆಸ್ ಈ ಬಾರಿ ಮತ್ತೆ ಹೆಚ್ಚು ಸ್ಥಾನ ಗಳಿಸಲು ಸಾಧ್ಯವಾಗಿದೆಯೇ ಹೊರತು, ಎಲ್ಲೋ ಕೂತು ಅಧಿಕಾರ ನಡೆಸುವವರಿಂದಲ್ಲ. ಸುರ್ಜೇವಾಲ ಅವರನ್ನು ಕರ್ನಾಟಕ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ.