ಸರ್ವೇ ಕಚೇರಿ ಶಿಫ್ಟ್‌ನಿಂದ ರೈತರಿಗೆ ಅನಾನುಕೂಲ

ದಾವಣಗೆರೆ, ಮೇ 19 – ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಅಧೀನದಲ್ಲಿದ್ದ ಭೂ ಸರ್ವೆ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯನ್ನು ಶಿವಾಲಿ ಟಾಕೀಸ್ ಬಳಿಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಇದು ರೈತ ವಿರೋಧಿ ಧೋರಣೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ. ಸತೀಶ್ ತೀವ್ರವಾಗಿ ಖಂಡಿಸಿದ್ದಾರೆ.

ಈಗಿರುವ ತಾಲ್ಲೂಕು ಕಚೇರಿ ಎಪಿಎಂಸಿ ರೈತ ಭವನದಲ್ಲಿದೆ. ಇದರಲ್ಲಿ ಸರ್ವೇ ಕಚೇರಿ ಕೂಡ ಇದ್ದು, ತಹಸೀಲ್ದಾರ್ ಅಧೀನದಲ್ಲಿರುತ್ತದೆ. ಇದು ಹೊಸ ಬಸ್ ನಿಲ್ದಾಣದ ಎದುರುಗಡೆ ಮತ್ತು ಎಪಿಎಂಸಿ ಪ್ರಾಂಗಣದಲ್ಲಿ ಇರುವುದರಿಂದ ರೈತರಿಗೆ ಅನುಕೂಲವಾಗಿದೆ. ತಾಲ್ಲೂಕು ಕಚೇರಿಗೆ ನಿತ್ಯ ಒಂದಿಲ್ಲೊಂದು ಕೆಲಸಕ್ಕೆ ಬರುವವರು ಅಲ್ಲಿದ್ದ ಸರ್ವೆ ಕಚೇರಿಗೂ ಬಂದು ಅವರವರ ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ಈಗ ಸರ್ವೆ ಕಚೇರಿ 3 ಕಿ.ಮೀ ದೂರ ಹೋದ್ರೆ ಓಡಾಡಲು ಆಟೋಗೆ 100 ಖರ್ಚಾಗುತ್ತದೆ. ಜೊತೆಗೆ ಸರ್ವೆ ಕಚೇರಿ ಕಡತಗಳಿಗೆ ತಹಸೀಲ್ದಾರ್ ಸಹಿಗಾಗಿ ಸಿಬ್ಬಂದಿ ಫೈಲ್ ಹಿಡಿದುಕೊಂಡು ಓಡಾಡಬೇಕು. ಅವರು ಬಂದಾಗ ತಹಸೀಲ್ದಾರ್ ಇಲ್ಲದಿದ್ದರೆ ಕಾಯಬೇಕು. ಸಮಯ ಮತ್ತು ಶ್ರಮ ವ್ಯರ್ಥವಾಗುತ್ತದೆ.

ಈ ಬಗ್ಗೆ ಎ.ಡಿ.ಎಲ್.ಆರ್ ಕಸ್ತೂರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪ್ರಶ್ನಿಸಿ ಕೇಳಿದಾಗ, ಅವರು ಈಗಿರುವ ಕಟ್ಟಡ ಶಿಥಿಲಗೊಂಡಿದೆ. ಮೇಲ್ಛಾವಣಿ ದುರ್ಬಲಗೊಂಡು ಸೋರುತ್ತಿದೆ. ಯಾವ ಕ್ಷಣದಲ್ಲಿಯಾದರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಬಹುದು. ಇದರಿಂದ ಸಿಬ್ಬಂದಿಯವರಿಗೆ ಸೂಕ್ತ ರಕ್ಷಣೆ ಇಲ್ಲ ಮತ್ತು ಭೂ ದಾಖಲೆಗಳಿಗೂ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಯವರ ಅನುಮೋದನೆ ಪಡೆದು ಕಚೇರಿ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 

ಕಟ್ಟಡ ಶಿಥಿಲಗೊಂಡಿದೆ, ದುರಸ್ತಿ ಮಾಡಿಸಿಕೊಡಿ ಎಂದು ತಹಸೀಲ್ದಾರ್ ಕಚೇರಿಯಿಂದ ಎಪಿಎಂಸಿಗೆ ಪತ್ರ ಬರೆದಿಲ್ಲ. ಕಳೆದ 3 ವರ್ಷಗಳಿಂದ ಜಿಲ್ಲಾಧಿಕಾರಿಯವರೆ ಎಪಿಎಂಸಿ ಆಡಳಿತಾಧಿಕಾರಿಯಾಗಿದ್ದಾರೆ. ಆದ್ರೂ ಕಟ್ಟಡ ದುರಸ್ತಿ ಕಡೆ ಗಮನ ಕೊಡದಿರುವುದು ಸೋಜಿಗದ ಸಂಗತಿಯಾಗಿದೆ ಎಂದು ಸತೀಶ್ ಆರೋಪಿಸಿದ್ದಾರೆ.

error: Content is protected !!