`ವಿಷ್ಣು ಪುಣ್ಯಭೂಮಿ’ ಬೆಂಗಳೂರಿನಲ್ಲಿಯೇ ಸ್ಥಾಪಿಸಬೇಕು

`ವಿಷ್ಣು ಪುಣ್ಯಭೂಮಿ’  ಬೆಂಗಳೂರಿನಲ್ಲಿಯೇ ಸ್ಥಾಪಿಸಬೇಕು

ದಾವಣಗೆರೆ, ಡಿ.15- ಸಾಹಸ ಸಿಂಹ ವಿಷ್ಣುವರ್ಧನ್ ಪುಣ್ಯಭೂಮಿ ಯನ್ನು ಬೆಂಗಳೂರಿನಲ್ಲಿಯೇ ಸ್ಥಾಪಿಸಬೇಕೆಂದು ಒತ್ತಾಯಿಸಿ ನಾಡಿದ್ದು ದಿನಾಂಕ 17 ರಂದು ಬೆಳಿಗ್ಗೆ 9 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ದಾವಣಗೆರೆ ಜಿಲ್ಲೆಯಿಂದಲೂ ಅಭಿಮಾನಿಗಳು ಭಾಗವಹಿಸಲಿದ್ದಾರೆಂದು ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಪದಾಧಿಕಾರಿ ಕೊಂಡಜ್ಜಿ ರಾಜಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಷ್ಣುವರ್ಧನ್ ಅವರು ವಂಶವೃಕ್ಷ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದು, ನಾಗರಹಾವು ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದರು.

ರಾಜ್ಯ, ದೇಶ, ವಿದೇಶಗಳಲ್ಲೂ ವಿಷ್ಣು ಅಭಿಮಾನಿಗಳಿದ್ದಾರೆ. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಬೆಂಗಳೂರಿನಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಅವರ `ಪುಣ್ಯಭೂಮಿ’ ನಮ್ಮ ಬೆಂಗಳೂರಿನಲ್ಲಿಯೇ ಆಗಬೇಕೆಂಬ ಹಲವಾರು ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. 

ಈ ಪ್ರತಿಭಟನೆಗೆ ದಾವಣಗೆರೆ ಅಖಿಲ ಕರ್ನಾಟಕ ಡಾ. ವಿಷ್ಣುವರ್ಧನ್ ಸಂಘ, ಡಾ. ವಿಷ್ಣು ಸೇನೆ, ಡಾ. ರಾಜ್‌ಕುಮಾರ್ ಅಭಿಮಾನಿ ಗಳ ಸಂಘ, ಡಾ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ, ಪುನೀತ್ ಅಭಿಮಾನಿಗಳ ಸಂಘ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳ ಸಂಘ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ, ರೆಬೆಲ್‌ಸ್ಟಾರ್ ಅಂಬರೀಶ್ ಅಭಿಮಾನಿಗಳ ಸಂಘ ಸೇರಿದಂತೆ, ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಅಭಿಮಾನಿಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ವಿಷ್ಣು ಕೇವಲ ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ, ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಕನ್ನಡ ನಾಡು, ನುಡಿ, ಭಾಷೆಗಾಗಿ ಎಲ್ಲ ಹಿರಿಯ ನಟರೊಂದಿಗೆ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಕನ್ನಡ ಚಳವಳಿಗಳಲ್ಲಿ ಭಾಗವಹಿಸಿ, ರಾಜ್ಯಾದ್ಯಂತ ಬೃಹತ್ ರಾಲಿ ಮೂಲಕ ಹೋರಾಟ ಮಾಡುತ್ತಾ ಬಂದಿದ್ದರು ಎಂದು ಹೇಳಿದರು.

ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಇದ್ದು, ಕೆಲವರು ಸ್ಥಳಾಂತರ ಮಾಡಬೇಕೆಂದು ಹೋರಾಟ ನಡೆಸಿದರು. ಶ್ರೀಮತಿ ಭಾರತಿ ವಿಷ್ಣುವರ್ಧನ್ ಕೂಡ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಲಕ್ಷಾಂತರ ವಿಷ್ಣು ಅಭಿಮಾನಿಗಳ ಮನಸ್ಸಿಗೆ ನೋವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿ ನಮ್ಮ ಕನ್ನಡ ನಾಡಿನ ಬೆಂಗಳೂರಿನಲ್ಲಿಯೇ ಆಗಬೇಕು. ಸರ್ಕಾರ ಈ ವಿಚಾರವನ್ನು ಬಗ್ಗೆ ಗಂಭೀರವಾಗಿ ಪರಿಗಣಿಸಿ, ಮುಂದೆ ಆಗಬಹುದಾದ ಕೆಲಸಗಳಿಗೆ ಸಹಾಯ ಮಾಡಬೇಕೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಮನು, ಜಿ.ಹೆಚ್. ತಿಮ್ಮೇಶ್, ಯೋಗೀಶ್, ಚಂದ್ರು, ಸತೀಶ್‌, ವಿಜಯಕುಮಾರ್, ರಂಗನಾಥ್ ಮತ್ತಿತರರಿದ್ದರು. 

error: Content is protected !!