ದಾವಣಗೆರೆ, ಡಿ.4- ಪಂಚ ರಾಜ್ಯಗಳ ಚುನಾವಣಾ ತೀರ್ಪನ್ನು ಕಾಂಗ್ರೆಸ್ ಪಕ್ಷ ತಲೆಬಾಗಿ ಸ್ವೀಕರಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಡಿ ಬಸವರಾಜ್ ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲ್ಲುವು ಸಾಧಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರೆಂಟಿಗಳ ಬಗ್ಗೆ ನಂಬಿಕೆ ಇಟ್ಟು ಅಲ್ಲಿನ ಮತದಾರರು ಮತದಾನ ಮಾಡಿದ್ದಾರೆ. ಆದ್ದರಿಂದ ನಾವು ಗೆಲ್ಲಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಅಧೀನದಲ್ಲಿರುವ ಇಡಿ ಮುಖಾಂತರ ಛತ್ತೀಸಗಡ್ ಮುಖ್ಯಮಂತ್ರಿ ಭೂಪೇಶ್ ಬಘೇಲ ಅವರು ಮಹಾದೇವ್ ಬೆಟ್ಟಿಂಗ್ ಆಪ್ನಿಂದ 508 ಕೋಟಿ ಹಣ ಪಡೆದಿದ್ದಾ ರೆಂದು ಸುಳ್ಳು ಆರೋಪಗಳನ್ನು ಮಾಡಿ ಅಪಪ್ರಚಾರ ಮಾಡಿದರು.ಇದರ ಫಲವಾಗಿ ಛತ್ತೀಸ್ಗಡದಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಹಣದ ಹೊಳೆಹರಿಸಿದೆ. ಜೊತೆಗೆ ಕಾಂಗ್ರೆಸ್ ನಾಯಕರ ವಿರುದ್ಧ ಐಟಿ, ಇಡಿ, ಸಿಬಿಐ ಮೂಲಕ ಚುನಾವಣಾ ಸಂದರ್ಭದಲ್ಲಿ ಕಿರುಕುಳ ನೀಡುತ್ತಾ ಬಂದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಅಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ.
2003ರಲ್ಲಿ ಕೇಂದ್ರದಲ್ಲಿ ಪ್ರಧಾನ ಮಂತ್ರಿಗಳಾಗಿ ಅಟಲ್ ಬಿಹಾರಿ ವಾಜಪೇಯಿ ಅವರಿದ್ದಾಗ ಇದೇ ರೀತಿ ಫಲಿತಾಂಶ ಬಂದಿತ್ತು. ನಂತರ 2004ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿತ್ತು. 2018ರಲ್ಲಿ ಕಾಂಗ್ರೆಸ್ ಪಕ್ಷ ಇದೇ ರೀತಿ ಜಯ ಸಾಧಿಸಿತ್ತು ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾಗಿತ್ತು. ಇದೀಗ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆದ್ದಿದ್ದರೂ ಸಹ 2024ರ ಲೋಕಸಭಾ ಚುನಾವಣೆಯಲ್ಲಿ ದೇಶದ ಜನ ಮೋದಿ ಆಡಳಿತಕ್ಕೆ ಅಂತ್ಯ ಆಡಲಿದ್ದಾರೆ ಎಂದು ಬಸವರಾಜ್ ಭವಿಷ್ಯ ನುಡಿದಿದ್ದಾರೆ.