ದಾವಣಗೆರೆ, ನ. 19- ಗಾಂಧೀಜಿ ಸರಳ ಜೀವನದ ಉದಾತ್ತ ಚಿಂತಕ, ಸತ್ಯ, ಸಾಕ್ಷಾತ್ಕಾರ ಇವರ ಬದುಕಿನ ಉದ್ದೇಶ. ಸರಳ ಜೀವನವನ್ನು ತಮ್ಮ ಸಾಮಾಜಿಕ, ಕೌಟುಂಬಿಕ, ಆರ್ಥಿಕ ಸೇರಿದಂತೆ ಎಲ್ಲಾ ರಂಗಗಳಲ್ಲೂ ಅಳವಡಿಸಿಕೊಂಡಿದ್ದರು. ಸತ್ಯ, ಸರಳತೆ, ಸೇವೆ, ತ್ಯಾಗಗಳ ಸಂಗಮವೇ ಗಾಂಧೀಜಿ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ. ಭಿಕ್ಷಾವರ್ತಿ ಮಠ ಹೇಳಿದರು.
ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ `ಗಾಂಧಿ ಚಿಂತನೆಗಳ ಪ್ರಸ್ತುತತೆ’ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧಿ ಯುದ್ಧ ವಿರೋಧಿಯಾಗಿದ್ದರು. ಯುದ್ಧಕ್ಕೆ ಪ್ರಮುಖ ಕಾರಣ ಧರ್ಮವನ್ನು ಅರ್ಥ ಮಾಡಿಕೊಳ್ಳದಿರುವುದು. ಧರ್ಮ ಧೈರ್ಯವಂತನಿಗೆ ಹೇಡಿಗಲ್ಲ. ರಕ್ತ ಸುರಿಸುವುದು ಧರ್ಮವಲ್ಲ. ಧರ್ಮದ ತಿರುಳು ತ್ಯಾಗ ಮತ್ತು ಸೇವೆ ಎಂಬ ನಿಲುವು ಗಾಂಧೀಜಿಯ ಪ್ರಾಣ, ತ್ರಾಣವಾಗಿತ್ತು ಎಂದರು.
ಪ್ರೊ.ಎಂ. ಬಸವರಾಜ್ ಮಾತನಾಡಿ, ಅಹಿಂಸೆ ಮತ್ತು ಶತ್ರುವನ್ನು ಪ್ರೀತಿಸಬೇಕು. ಯಾವುದನ್ನು ಒಟ್ಟಿಗೆ ಇಟ್ಟುಕೊಳ್ಳುವುದೋ ಅದೇ ಧರ್ಮ ಎಂದು ಆಚರಿಸಿದರು ಎಂದು ತಿಳಿಸಿದರು.
ಟ್ರಸ್ಟ್ ಸಂಸ್ಥಾಪಕ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ಗಾಂಧೀಜಿ ಇಂದಿಗೂ, ಎಂದಿಗೂ ಪ್ರಸ್ತುತ. ಅವರ ವಿಚಾರಗಳು ವಿಶ್ವದ ಶಾಶ್ವತ ಸತ್ಯಗಳು. ಗಾಂಧಿಯವರ ಸತ್ಯ, ಬ್ರಹ್ಮಚರ್ಯೆ, ಅಹಿಂಸೆ, ಆಸ್ತೇಯ, ಅಪರಿಗ್ರಹ, ಶರೀರಶ್ರಮ, ಅಸ್ವಾದ, ಅಭಯ, ಸರ್ವಧರ್ಮ ಸಮಾನತ್ವ, ಸ್ವದೇಶಿ, ಅಸ್ಪೃಶ್ಯತಾ ನಿವಾರಣೆ ಇವುಗಳು ಎಲ್ಲಾ ದೇಶಗಳಿಗೂ, ಎಲ್ಲಾ ಧರ್ಮಗಳಿಗೂ ಪ್ರಸ್ತುತ ಎಂದರು.
ಚಿಂತನ-ಮಂಥನದಲ್ಲಿ ಹೆಚ್.ಕೆ. ಕೊಟ್ರಪ್ಪ, ನಿಜಗುಣ, ರಾಮನಗೌಡ, ಕುಸಗೂರು, ಗುರುಮೂರ್ತಿ, ಮಲ್ಲಾಬಾದಿ ಬಸವರಾಜ ಮುಂತಾದವರಿದ್ದರು.