ಭದ್ರಾ ನಾಲೆಯಲ್ಲಿ ನೀರು ಹರಿಸದಿದ್ದರೆ ಉಗ್ರ ಹೋರಾಟ : ರೈತರ ಎಚ್ಚರಿಕೆ

ಭದ್ರಾ ನಾಲೆಯಲ್ಲಿ ನೀರು ಹರಿಸದಿದ್ದರೆ ಉಗ್ರ ಹೋರಾಟ : ರೈತರ ಎಚ್ಚರಿಕೆ

ಮಲೇಬೆನ್ನೂರು, ಸೆ. 19 – ಭದ್ರಾ ನಾಲೆಯಲ್ಲಿ ಸತತವಾಗಿ 100 ದಿನ ನೀರು ಹರಿಸುವಂತೆ ಅಚ್ಚು ಕಟ್ಟಿನ ರೈತರು ಮಂಗಳವಾರ ಮಲೇಬೆನ್ನೂರಿನ ನೀರಾವರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಸರ್ಕಾರದ 100 ದಿನ ನೀರು ಹರಿಸುವ ತೀರ್ಮಾನ ಪ್ರಕಟಿಸಿದ ನಂತರವೇ ನಾವು ಭತ್ತದ ನಾಟಿ ಮಾಡಿದ್ದೇವೆ. ಈಗ ಏಕಾಏಕಿ ನಾಲೆಯಲ್ಲಿ ನೀರು ನಿಲ್ಲಿಸಿದರೆ ನಮ್ಮ ಗತಿ ಏನು ? ಎಂದು ಆಕ್ರೋಶ ವ್ಯಕ್ತ ಪಡಿಸಿದ ರೈತರು, ನಾಲೆಯಲ್ಲಿ ನೀರು ಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈಗಾಗಲೇ ಎಕರೆಗೆ ಸುಮಾರು 25 ಸಾವಿರ ರೂ.ಖರ್ಚು ಮಾಡಿ ನಾಟಿ ಮಾಡಿದ್ದೇವೆ. ಇಂತಹ ಸಂದರ್ಭದಲ್ಲಿ ನೀರು ನಿಲುಗಡೆ ಮಾಡುವುದರಿಂದ ಅಪಾರ ನಷ್ಟವಾಗಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕೆಂದು ನೂರಾರು ರೈತರು ಆಗ್ರಹಿಸಿದರು. ನಂತರ ಎಇಇ ಧನಂಜಯ ಅವರಿಗೆ ಮನವಿ ಪತ್ರ ನೀಡಿ ನೀರು ಮುಂದುವರೆಸುವಂತೆ ಮನವಿ ಮಾಡಿದದರು. 

ರೈತರಾದ ಕೆ.ಎನ್‌. ಹಳ್ಳಿ ಅಶೋಕ್‌, ಕೈಬಳೆ ರಾಮಣ್ಣ, ಭೀಮಣ್ಣ, ತಿಪ್ಪೇಶ್‌, ಹೊಳೆಸಿರಿಗೆರೆಯ ಬಂಡೇರ ಪ್ರಭು, ದೇವರಾಜ್‌, ಯಲವಟ್ಟಿಯ ಹೆಚ್‌. ಶಾಂತವೀರಪ್ಪ, ಮುದೇಗೌಡ್ರ ನಾಗರಾಜ್‌, ಡಿ.ಹೆಚ್‌. ಮಹೇಂದ್ರಪ್ಪ, ಮದಕರಿ, ಎ. ರಾಜಶೇಖರಮೂರ್ತಿ, ಜಿಗಳಿಯ ಬಿಳಸನೂರು ಚಂದ್ರಪ್ಪ, ಕಮಲಾಪುರದ ಮಹೇಶ್ವರಪ್ಪ, ಶೇಖರಪ್ಪ, ಮಲ್ಲಿಕಾರ್ಜುನ್‌, ರಮೇಶ್‌, ಮಲೇಬೆನ್ನೂರಿನ ಮುದೇಗೌಡ್ರ ತಿಪ್ಪೇಶ್‌, ಸೇರಿದಂತೆ ನಿಟ್ಟೂರು, ಕುಂಬಳೂರು, ಜಿ.ಬೇವಿನಹಳ್ಳಿ, ನಂದಿ ತಾವರೆ ಕ್ಯಾಂಪಿನ ನೂರಾರು ರೈತರು ಪ್ರತಿಭಟನೆಯಲ್ಲಿದ್ದರು. 

ಇದೇ ವೇಳೆ ಬಾಕಿ ವೇತನಕ್ಕೆ ಆಗ್ರಹಿಸಿ ಕಳೆದ 8 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ದಿನಗೂಲಿ ನೌಕರರೂ ಕೂಡಾ ರೈತರ ಹೋರಾಟಕ್ಕೆ ಬೆಂಬಲ ನೀಡಿ, ನೀರು ಹರಿಸುವಂತೆ ಆಗ್ರಹಿಸಿದರು.

error: Content is protected !!