ಹರಿಹರ : ನೌಕಾದಳಕ್ಕೆ ಆಯ್ಕೆಯಾದ ಅಂಗನವಾಡಿ ಸಹಾಯಕಿ ಪುತ್ರಿ ಭೂಮಿಕಾ

ಹರಿಹರ : ನೌಕಾದಳಕ್ಕೆ ಆಯ್ಕೆಯಾದ ಅಂಗನವಾಡಿ ಸಹಾಯಕಿ ಪುತ್ರಿ ಭೂಮಿಕಾ - Janathavaniಹರಿಹರ, ಜೂ.5- ನಗರದ  ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಲತಾ ದಿ. ವೈ.ಜಿ. ಮಂಜುನಾಥ್ ಎರೇಸೀಮೆ ಎಂಬುವರ ಪುತ್ರಿ ವೈ.ಎಂ. ಭೂಮಿಕಾ  ದೇಶದ ನೌಕಾಪಡೆಗೆ  ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಮುಗಿಸಿ, 8 ರಿಂದ 10 ನೇ ತರಗತಿಯವರೆಗೆ ಮೈಸೂರಿನ ಎಸ್.ಎಸ್. ಸುತ್ತೂರು ಶಾಲೆ ಹಾಗೂ 2 ವರ್ಷ ಪಿಯುಸಿಯನ್ನು ಮೊರಾರ್ಜಿ ರೆಸಿಡೆನ್ಸಿ ಗರ್ಲ್ಸ್ ಕಾಲೇಜ್, ದೊಡ್ಡ ಖಾನೆ, ಮೈಸೂರಿನಲ್ಲಿ ಮುಗಿಸಿದ್ದಾರೆ.

ದಿನಾಂಕ 7-2-23ರಂದು ಬೆಂಗಳೂರಿ ನಲ್ಲಿ ಕಂಪ್ಯೂಟರ್‌ ಆನ್ ಲೈನ್ ಪರೀಕ್ಷೆ ಬರೆದು, ನಂತರ    ಕೇರಳದ ಫಿಜಿಕಲ್ ಮತ್ತು ಮೆಡಿಕಲ್ ಟೆಸ್ಟ್‌ನಲ್ಲಿ ಉತ್ತೀರ್ಣರಾಗಿರುವ ಭೂಮಿಕಾ ಅಂತಿಮವಾಗಿ ನೌಕಾಪಡೆಗೆ ಆಯ್ಕೆಯಾಗಿದ್ದಾರೆ.

ತಂದೆ ಮಂಜುನಾಥ್ ಎರೇಸೀಮೆ ಹಲವು ವರ್ಷಗಳ ಹಿಂದೆ ನಿಧನರಾಗಿದ್ದು, ತಾಯಿ ಲತಾ ಹಳೆ ಕಚೇರಿಯ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರದಿಂದ ಬರುವ ಸಂಬಳ ಹಾಗೂ ಮನೆಯಲ್ಲಿ ಕಟ್ಟಿರುವ ಎರಡು ಹಸುಗಳಿಂದ ಬರುವ ಆದಾಯದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾರೆ.

ನೌಕಾದಳಕ್ಕೆ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇದು ನನ್ನ ಜೊತೆಗೆ, ತಾಯಿ ಲತಾ ಅವರ ಪರಿಶ್ರಮದ ಫಲವೂ ಆಗಿದೆ ಅಲ್ಲದೇ, ನಾನು ಉನ್ನತ ಸ್ಥಾನಕ್ಕೆ ಬರಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಅವರು ಆಸೆ ಪಟ್ಟಂತೆ ಇಂದು ಆಯ್ಕೆಯಾಗಿರುವುದು ಸಂತೋಷ ತಂದಿದೆ ಎನ್ನುತ್ತಾರೆ  ಭೂಮಿಕಾ. ಒಡಿಶಾ ರಾಜ್ಯದ ಚಿಲಕಾ ಜಿಲ್ಲೆಯಲ್ಲಿ ಇನ್ನೂ ಒಂದು ವರ್ಷಗಳ ಕಾಲ ತರಬೇತಿಯನ್ನು ಪಡೆಯಬೇಕಾಗಿದ್ದು, ಅದಕ್ಕಾಗಿ ಸಿದ್ದತೆ ನಡೆಸಿರುವುದಾಗಿ ಅವರು ಹೇಳಿದರು.

ತಾಯಿ ಶ್ರೀಮತಿ ಲತಾ ಮಾತನಾಡಿ, ನಾವು ದೊಡ್ಡ ಶ್ರೀಮಂತ ವರ್ಗದವರಲ್ಲ. ಅಂಗನವಾಡಿ ಕೇಂದ್ರದಿಂದ ಬರುವ ಆದಾಯ ಮತ್ತು ಹಸುಗಳಿಂದ ಬರುವ ಆದಾಯದಲ್ಲಿ ಮೂರು ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇನೆ. ಮಗಳು ಕೇಂದ್ರ ನೌಕಾಪಡೆಗೆ ಆಯ್ಕೆಯಾಗಿರುವುದು ಸಂತಸ ತರಿಸಿದೆ. ಸರ್ಕಾರ ನಮ್ಮಂತ ಬಡವರಿಗೆ ಸಹಾಯ ಮಾಡಿದರೆ ಅನುಕೂಲ ಆಗುತ್ತದೆ ಎಂದು ಹೇಳಿದರು.

error: Content is protected !!