ಮಗಳ ಮೇಲೆ ಅತ್ಯಾಚಾರ: ತಂದೆಗೆ 20 ವರ್ಷ ಕಠಿಣ ಶಿಕ್ಷೆ

ದಾವಣಗೆರೆ, ಜೂ.1- ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಎಫ್‌ಟಿಎಸ್‌ಸಿ–1 (ಪೋಕ್ಸೋ ನ್ಯಾಯಾಲಯ) 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಹರಿಹರ ತಾಲ್ಲೂಕಿನ ದುರುಗಪ್ಪ ಶಿಕ್ಷೆಗೊಳಗಾದ ವ್ಯಕ್ತಿ.

ಈತ ಬಾಲಕಿಯಾದ ತನ್ನ ಮಗಳಿಗೆ ತಿಂಡಿ, ಬಟ್ಟೆ ಕೊಡಿಸುತ್ತಾ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವಳನ್ನು ಹೆದರಿಸಿ ಅತ್ಯಾಚಾರ ಮಾಡುತ್ತಾ ಬಂದಿದ್ದ. ರಾಜ್ಯ ಹೆದ್ದಾರಿಯೊಂದರ ಖಾಲಿ ಜಾಗದಲ್ಲಿ ತಗಡಿನ ಶೀಟ್‌ನಿಂದ ನಿರ್ಮಿಸಿದ ಮನೆಯ ಹಿಂದೆ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ. ಈ ಸಂಬಂಧ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವೃತ್ತ ನಿರೀಕ್ಷಕ ಶಿವಪ್ರಸಾದ್ ಎಂ.  ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಪಾದ ಎನ್. ಅವರು 20 ವರ್ಷಗಳ ಕಠಿಣ ಶಿಕ್ಷೆ 12,000 ದಂಡ ವಿಧಿಸಿದ್ದಾರೆ. ಸಂತ್ರಸ್ತೆಗೆ 5 ಲಕ್ಷ ಪರಿಹಾರವನ್ನು ಸರ್ಕಾರದಿಂದ ನೀಡಬೇಕು ಎಂದು ಆದೇಶ ನೀಡಿದರು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುನಂದ ಈಶ್ವರಪ್ಪ ಮಡಿವಾಳರ ಅವರು ಸಾಕ್ಷಿದಾರರ ವಿಚಾರಣೆ ಮಾಡಿದ್ದು, ಕೆ.ಜಿ. ಜಯಪ್ಪ ವಾದ ಮಂಡಿಸಿದ್ದರು.

error: Content is protected !!