ದಾವ ಣಗೆರೆ, ಮೇ 26- ಇಲ್ಲಿನ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ‘ಪರಿಸರಕ್ಕಾಗಿ ಜೀವನ ಶೈಲಿ’ ಎಂಬ ಕಾರ್ಯಕ್ರಮವನ್ನು ಕೋರಮಂಡಲ್ ಇಂಟರ್‌ನ್ಯಾಷನಲ್ ಕಂಪನಿ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಬದಲಾದ ಜೀವನ ಶೈಲಿ, ಅತಿಯಾದ ಎಣ್ಣೆ ಪದಾರ್ಥಗಳ ಸೇವನೆ, ಅತಿಯಾದ ರಾಸಾಯನಿಕ ವಸ್ತುಗಳ ಬಳಕೆ ವಾತಾವರಣದ ಮೇಲೆ ಅನಾನುಕೂಲಗಳನ್ನು ಮಾಡುತ್ತಿದೆ, ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳಬೇಕು ಹಾಗೂ ಸಾವಯವ ಕೃಷಿಗೆ ಹೆಚ್ಚು ಒತ್ತು ಕೊಟ್ಟರೆ ಮಣ್ಣು, ನೀರು ಹಾಗೂ ಪರಿಸರವನ್ನು ಸಂರಕ್ಷಿಸುವ ಜೊತೆಗೆ ನಮ್ಮ ಆರೋಗ್ಯವನ್ನು ವೃದ್ಧಿಗೊಳಿಸಬಹುದು ಎಂದರು.
ವಿಷಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಮಾತನಾಡಿ, ಮುಂದಿನ ಭವಿಷ್ಯಕ್ಕಾಗಿ ಸಿರಿಧಾನ್ಯ ಬೆಳೆಗಳಿಗೆ ಹೆಚ್ಚು ಒತ್ತು ಕೊಡಬೇಕಾಗಿದೆ. ಹವಾಮಾನ ವೈಪರೀತ್ಯಕ್ಕೆ ಸರಿಹೊಂದುವ ತಳಿಗಳನ್ನು ಬಳಸಬೇಕಾಗಿದೆ. ಮಣ್ಣು ಮತ್ತು ನೀರು ಸಂರಕ್ಷಣೆ ಮಾಡಬೇಕಾಗಿದೆ. ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಆಚರಿಸುವುದರಿಂದ ಸಿರಿಧಾನ್ಯ ಬೆಳೆಗಳನ್ನು ಮೌಲ್ಯವರ್ಧನೆ ಮಾಡಬೇಕು ಹಾಗೂ ಸಿರಿಧಾನ್ಯ ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ ಎಂದರು.
ವಿಜ್ಞಾನಿಗಳಾದ ಬಸವನಗೌಡ ಎಂ.ಜಿ., ರಘುರಾಜ ಜೆ, ಡಾ. ಅವಿನಾಶ್ ಟಿ.ಜಿ. ಹಾಗೂ ಕೋರಮಂಡಲ ಇಂಟರ್‌ನ್ಯಾಷನಲ್ ಲಿಮಿಟೆಡ್ ಕ್ಷೇತ್ರ ಮಟ್ಟದ ಸಿಬ್ಬಂದಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.