ಬಿಐಇಟಿಯಲ್ಲಿ ನಾಳೆ ಯೋಜನಾ ವಸ್ತು ಪ್ರದರ್ಶನ-ನಿರ್ಮಾಣ 3.0

ದಾವಣಗೆರೆ, ಮೇ 26- ನಗರದ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳ ಯೋಜನಾ ವಸ್ತು ಪ್ರದರ್ಶನ – ನಿರ್ಮಾಣ 3.0 ಕಾರ್ಯಾಗಾರವನ್ನು ನಾಳೆ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. 

ವಸ್ತು ಪ್ರದರ್ಶನದಲ್ಲಿ ಸುಮಾರು 10 ತಾಂತ್ರಿಕ ವಿಭಾಗದ 150 ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಕರ ನೆರವು ಮತ್ತು ಸಲಹೆ ಗಳೊಂದಿಗೆ ಸಂಶೋಧಿಸಿ ಅಭಿವೃದ್ಧಿಪಡಿಸಿದ ಯೋಜನೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಸುಮಾರು 50 ವಸ್ತು ಯೋಜನೆಗಳನ್ನು ಪ್ರದರ್ಶನಕ್ಕೆ ಅನುಮೋದಿಸಿದ್ದು, ಇವುಗಳಲ್ಲಿ 18 ವಸ್ತು ಯೋಜನೆಗಳಿಗೆ  ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಬೆಂಗಳೂರು ಇವರಿಂದ ಹಣಕಾಸಿನ ನೆರವು ದೊರಕಿದೆ.  ಉಳಿದ ವಸ್ತು ಯೋಜನೆಗಳಿಗೆ ಕಾಲೇಜಿನ ಹಣಕಾಸಿನ ನೆರವು ದೊರಕಿದೆ.

ವಸ್ತು ಯೋಜನೆಗಳನ್ನು ಗುಣಮಟ್ಟ ಮತ್ತು ತಂತ್ರಜ್ಞಾನ ಸಾಮ್ಯತೆಯನ್ನು ಆಧರಿಸಿ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ವಿವಿಧ ನುರಿತ ವಿಷಯ ತಜ್ಞರು ವಸ್ತು ಯೋಜನೆಗಳನ್ನು ಅವಲೋಕಿಸಿ, ವಿಶ್ಲೇಷಿಸಿ ಹೊಸತನವನ್ನು ಒಳಗೊಂಡಿರುವ, ಸಾಮಾಜಿಕ ಜಾಗೃತಿ ಮೂಡಿಸುವ ಮತ್ತು ವಿಭಾಗದಲ್ಲಿ ಅತ್ಯುತ್ತಮವಾಗಿರುವ ಯೋಜನೆಗಳನ್ನು ಪ್ರಶಸ್ತಿಗೆ ಆಯ್ಕೆಮಾಡಿ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಿದ್ದಾರೆ.

ಉದ್ಘಾಟನೆಯನ್ನು  ಕಾಲೇಜಿನ ಮೆಕ್ಯಾನಿ ಕಲ್ ವಿಭಾಗದ ಹಿರಿಯ ವಿದ್ಯಾರ್ಥಿ ಹಾಗೂ ಶಿವಮೊಗ್ಗದ ಕೈಗಾರಿಕೋ ದ್ಯಮಿ ಮತ್ತು ಕೊಲ್ಕೊತ್ತದ ಇನ್ಸ್ಟಿಟ್ಯೂಟ್ ಇಂಡಿಯನ್ ಫೌಂ ಡ್ರಿಮೆನ್ ಸಂಸ್ಥೆಯ ಉಪಾಧ್ಯಕ್ಷ ಇಂಜಿನಿಯರ್ ಡಿ.ಎಸ್.ಚಂದ್ರಶೇಖರ್ ನೆರೆವೇರಿಸಲಿದ್ದಾರೆ. ಪ್ರಾಂಶುಪಾಲ ಡಾ. ಎಚ್.ಬಿ.ಅರವಿಂದ್, ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ ಇತರರು ಉಪಸ್ಥಿತರಿರಲಿದ್ದಾರೆಂದು ಕಾರ್ಯಾಗಾರದ ಆಯೋಜಕರಾದ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿಕಾಯರಾದ
ಡಾ. ಎ.ಜಿ.ಶಂಕರಮೂರ್ತಿ ತಿಳಿಸಿದ್ದಾರೆ.

error: Content is protected !!