ನಿರುದ್ಯೋಗಿಗಳಿಗೆಲ್ಲರಿಗೂ ನಿರುದ್ಯೋಗ ಭತ್ಯೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ದಾವಣಗೆರೆ, ಮೇ 25- ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಎಲ್ಲಾ ನಿರುದ್ಯೋಗಿಗಳಿಗೂ ನಿರುದ್ಯೋಗ ಭತ್ಯೆ ನೀಡುವಂತೆ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಶನ್ (ಎಐಡಿವೈಓ) ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಪರಶುರಾಮ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪದವಿ ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳ ನಿರುದ್ಯೋಗ ಭತ್ಯೆ ನೀಡುವ ಯುವ ನಿಧಿ ಯೋಜನೆಯ ಪ್ರಕಾರ 2022-23 ನೇ ಶೈಕ್ಷಣಿಕ ಸಾಲಿನಲ್ಲಿ ತೇರ್ಗಡೆ ಯಾದ ಅಭ್ಯರ್ಥಿಗಳಿಗೆ ಮಾತ್ರ ನಿರುದ್ಯೋಗ ಭತ್ಯೆ ಅದು ಎರಡು ವರ್ಷಗ ಳ ಅವಧಿಗೆ ಮಾತ್ರ ನೀಡಲಾಗುವುದು ಎಂಬ ಷರತ್ತು ವಿಧಿಸಲಾಗಿದೆ. ಹಾಗಾದರೆ ಈ ಅವಧಿಗೂ ಮುನ್ನ ಪದವಿ, ಡಿಪ್ಲೋಮಾ ಮುಗಿಸಿ, ಉದ್ಯೋಗಕ್ಕಾಗಿ ಅಲೆಯುತ್ತಿರುವ ಯುವಜನರು ನಿರುದ್ಯೋಗಿಗಳು ಅಲ್ಲವೇ ? ಎಂದು ಪ್ರಶ್ನಿಸಿದರು. ಶಶಿಕುಮಾರ್ ಮಾತನಾಡಿ, ನಿರುದ್ಯೋಗ ಭತ್ಯೆ ನೀಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ  ಸರ್ಕಾರ ನಿರುದ್ಯೋಗಿ ಎಂಬ ಪದವನ್ನು ತನ್ನ ಮನಸೋ ಇಚ್ಛೆ ವ್ಯಾಖ್ಯಾನಿಸಿಕೊಂಡು ಅವರಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡುತ್ತೇವೆ ಎನ್ನುವುದು ನಾಡಿನ ಯುವ ಜನರಿಗೆ ಬಗೆಯುವ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.