ಧಾರಾಕಾರ ಸುರಿದ ಮಳೆಗೆ ಭತ್ತದ ಬೆಳೆಗೆ ಹಾನಿ

ವರದಿ ತಯಾರಿಸಲು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಸೂಚನೆ

ದಾವಣಗೆರೆ, ಮೇ 23- ಜಿಲ್ಲೆಯಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾನುವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕೊಯ್ಲಿಗೆ ಬಂದಿದ್ದ ಭತ್ತ ಕೈಗೆ ಸಿಗದಂತಾಗಿ ಅಪಾರ ನಷ್ಟ ಸಂಭವಿಸಿದೆ.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಲ್ಕುಂಟೆ, ತೊಗಲೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಕೊಯ್ಲಿಗೆ ಬಂದ ಭತ್ತ ಬೆಳೆಯ ನಷ್ಟ ಸಂಭವಿಸಿದ್ದು, ಸುದ್ದಿ ತಿಳಿದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಅಧಿಕಾರಿಗಳಿಗೆ ಕೂಡಲೇ ಸ್ಥಳಕ್ಕೆ ಧಾವಿಸಿ, ನಷ್ಟವಾಗಿರುವ ಭತ್ತದ ಹಾನಿ ಬಗ್ಗೆ ವರದಿ ತಯಾರಿಸಿ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ಮೊದಲ ಅಧಿವೇಶನ ಮತ್ತು ಶಾಸಕರಿಗೆ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಇಂದು ರೈತರನ್ನು ಭೇಟಿ ಮಾಡಲು ಆಗಿಲ್ಲ. ಆದರೂ ನಾನು ನಮ್ಮ ಕ್ಷೇತ್ರದ ರೈತಪರ ಕಾಳಜಿ ಹೊಂದಿರುವುದರಿಂದ ಸುದ್ದಿ ತಿಳಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾನಿಯಾಗಿರುವ ಭತ್ತದ ಬೆಳೆ ಹಾಗೂ ಅಂದಾಜು ನಷ್ಟವನ್ನು ತಯಾರಿಸಿ ರೈತರಿಗೆ ಪರಿಹಾರ ವಿತರಿಸಬೇಕೆಂದು ಸೂಚನೆ ನೀಡಿದ್ದೇನೆ. ಅಧಿವೇಶನ ಮುಗಿದ ಕೂಡಲೇ ಬೆಂಗಳೂರಿನಿಂದ ಕ್ಷೇತ್ರಕ್ಕೆ ಹಿಂದಿರುಗಿ ನಷ್ಟಕ್ಕೊಳಗಾಗಿರುವ ಗ್ರಾಮಗಳಿಗೆ ತೆರಳಿ ರೈತರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ರೈತರಿಗೆ ಧೈರ್ಯ ತುಂಬಿದ್ದಾರೆ.

error: Content is protected !!