20ನೇ ದಿನದತ್ತ ‘ಆಶಾ’ ಅನಿರ್ದಿಷ್ಟ ಹೋರಾಟ

ಜಿಲ್ಲಾಡಳಿತದ ಮುಂದೆ ಪ್ರತಿಭಟನಾ ಧರಣಿ

ದಾವಣಗೆರೆ, ಜು.29- ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆಯಿಂದ ದೂರ ಉಳಿದು ಕೈಗೊಂಡಿರುವ ಅನಿರ್ದಿಷ್ಟ ಮುಷ್ಕರವು ಇಂದಿಗೆ 20ನೇ ದಿನಕ್ಕೆ ಕಾಲಿಟ್ಟಿದೆ.

ಹೋರಾಟದ ತೀವ್ರ ಸ್ವರೂಪವಾಗಿ ನಗರದ ಜಿಲ್ಲಾಡಳಿತ ಕಚೇರಿ ಬಳಿಯ ರಸ್ತೆಯಲ್ಲಿ ಇಂದು ಜಮಾಯಿಸಿದ್ದ ಆಶಾ ಕಾರ್ಯಕರ್ತೆಯರು ಕೆಲ ಕಾಲ  ಪ್ರತಿಭಟನಾ ಧರಣಿ ನಡೆಸಿದರು.  

ನಮ್ಮ ಮನವಿ ಪತ್ರಗಳಲ್ಲಿನ ವಿಷಯಗಳ ಕುರಿತು ಚರ್ಚಿಸಲು ಈವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಅನಿವಾರ್ಯವಾಗಿ ರಾಜ್ಯದಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ಮಾಡುತ್ತಿದ್ದೇವೆ. ಜೀವವನ್ನು ಪಣವಾಗಿಟ್ಟು, ಅಪಾಯಕ್ಕೆ ಒಡ್ಡುವುದರ ಮೂಲಕ ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರು ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಛೇರಿಗೆ ಮುತ್ತಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ‌ ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಸಂಘಟನೆಯ ರಾಜ್ಯ ನಾಯಕರುಗಳನ್ನು ಕರೆಸಿ ಚರ್ಚಿಸಿ, ಇಂದು ತಮ್ಮ ಅಭಿಪ್ರಾಯ ಹೇಳುವುದಾಗಿ ಹೇಳಿದ್ದರು. ಆದ್ದರಿಂದ ಇಂದು ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಂತರ ಸರ್ಕಾರದ ಪ್ರತಿಕ್ರಿಯೆ ನೋಡಿಕೊಂಡು ನಾಳೆಯಿಂದ ಆಶಾ ಕಾರ್ಯಕರ್ತೆಯರು ಕೆಲಸಕ್ಕೆ ಹೋಗುವುದು ಅಥವಾ ಮುಷ್ಕರ ಮುಂದುವರೆಸುವುದರ ಬಗ್ಗೆ  ನಿರ್ಧರಿಸಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ, ಭಾರತಿ, ಮಧು ತೊಗಲೇರಿ, ಜಿಲ್ಲಾ ಆಶಾ ನಾಯಕರುಗಳಾದ ನಾಗವೇಣಿ, ಸುಮ, ಮಾರಕ್ಕ, ಲೀಲಾವತಿ, ಅನಿತಾ, ಲಲಿತಮ್ಮ, ಪರ್ವೀನ್ ಬಾನು, ರುಕ್ಕಮ್ಮ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

error: Content is protected !!