ಒಂದೇ ರೀತಿಯ ಕೊರೊನಾ : ಲಸಿಕೆಗೆ ಸಹಾಯಕ, ಮಾರಕವಾಗುವ ಅಪಾಯ ಕಡಿಮೆ

ನವದೆಹಲಿ, ಜು. 24 – ಕೊರೊನಾ ಸೋಂಕಿನಲ್ಲಿ ಹಲವು ಉಪ ಜಾತಿಗಳಿದ್ದು, ವಿಶ್ವದಾದ್ಯಂತ ಅತಿಯಾಗಿ ಹರಡಿರುವ ಪ್ರಜಾತಿಯೇ ಭಾರತದಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಇದು ಲಸಿಕೆ ಹಾಗೂ ಔಷಧಿ ಅಭಿವೃದ್ಧಿಗೆ ನೆರವಾಗಲಿದೆ ಎಂದು ಉನ್ನತ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ವೈರಸ್‌ನ ಜೀನ್ ವರ್ಗೀಕರಣ ಮಾಡಲಾಗಿದ್ದು, ಇದು ಅಪಾಯಕಾರಿ ಸ್ವರೂಪಕ್ಕೆ ರೂಪಾಂತರಣಗೊಳ್ಳುವ ಸಾಧ್ಯತೆ ಕಡಿಮೆ ಎಂದು ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಬಯಾಲಜಿಯ ನಿರ್ದೇಶಕ ರಾಕೇಶ್ ಮಿಶ್ರ ತಿಳಿಸಿದ್ದಾರೆ.

ದೇಶಾದ್ಯಂತ 1,700 ಕೊರೊನಾ ವೈರಸ್ ಸಿಕ್ವೆನ್ಸ್‌ಗಳು ಸಾರ್ವಜನಿಕವಾಗಿ ಲಭ್ಯವಿವೆ. ಇವುಗಳನ್ನು ಮಿಶ್ರ ಅವರ ಸಂಸ್ಥೆ ಅಧ್ಯಯನಕ್ಕೆ ಒಳಪಡಿಸಿದೆ.

ವೈರಸ್‌ಗಳು ಪ್ರತಿ ಹದಿನೈದು ದಿನಕ್ಕೊಮ್ಮೆ ರೂಪಾಂತರಣಗೊಳ್ಳುತ್ತವೆ. ಕೊರೊನಾ ವೈರಸ್ ಸಹ ಇದೇ ಪ್ರವೃತ್ತಿ ಹೊಂದಿದೆ. ಇದು ವೈರಸ್ ಸ್ಥಿರ ಸ್ವರೂಪ ಪಡೆದುಕೊಂಡಿರುವುದನ್ನು ತೋರಿಸುತ್ತಿದೆ. ಈ ವೈರಸ್ ಇನ್ನು ಅಪಾಯಕಾರಿಯಾಗಿ ಪರಿವರ್ತನೆಯಾಗುವ ಸಾಧ್ಯತೆ ಕಡಿಮೆ ಎಂದವರು ಹೇಳಿದ್ದಾರೆ.

ಜಾಗತಿಕವಾಗಿ ಕೊರೊನಾ ವೈರಸ್‌ನ ಎ2ಎ ಮಾದರಿ ಶೇ.80ರಿಂದ 90ರಷ್ಟಿದೆ. ಭಾರತದಲ್ಲೂ ಸಹ ಇದೇ ಮಾದರಿ ವೈರಸ್ ಕಂಡು ಬರುತ್ತಿದೆ. ಇದರಿಂದಾಗಿ ಜಗತ್ತಿನ ಎಲ್ಲೇ ಲಸಿಕೆ ಹಾಗೂ ಔಷಧಿ ಕಂಡು ಹಿಡಿದರೂ ಅದು ನಮ್ಮ ದೇಶದಲ್ಲಿ ಪರಿಣಾಮಕಾರಿಯಾಗಿರುತ್ತದೆ ಎಂದವರು ವಿವರಿಸಿದ್ದಾರೆ.

error: Content is protected !!