ಶಾಸಕ ಎಸ್. ರಾಮಪ್ಪ
ಮಲೇಬೆನ್ನೂರು, ಜು.14- ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಬಿಜೆಪಿ ಸರ್ಕಾರ ಜನರ ನಂಬಿಕೆ ಕಳೆದುಕೊಂಡಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ಯಲವಟ್ಟಿ ಗ್ರಾಮದ ಜೆಡಿಎಸ್ ಮುಖಂಡ ಅನಂತ್‌ನಾಯ್ಕ್ ನೇತೃತ್ವದಲ್ಲಿ ಹಲವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಸಂದರ್ಭದಲ್ಲಿ ಅವರು ಮಾತನಾಡಿದರು.
ಬರೀ ಸುಳ್ಳು ಭರವಸೆ ನೀಡುವ ಬಿಜೆಪಿಯಿಂದ ದೇಶ, ರಾಜ್ಯ ಹಾಗೂ ಜನರ ಅಭಿವೃದ್ಧಿ ಸಾಧ್ಯವಿಲ್ಲ. ಜಿ.ಪಂ., ತಾ.ಪಂ. ಚುನಾವಣೆಯಲ್ಲಷ್ಟೇ ಅಲ್ಲ, ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ನಮ್ಮ ತಾಲ್ಲೂಕಿಗೆ ಸಮ್ಮಿಶ್ರ ಸರ್ಕಾರ ನೀಡಿದ್ದ ಅನುದಾನವನ್ನು ತಡೆ ಹಿಡಿದಿದೆ. ನಮ್ಮದೇ ಸರ್ಕಾರ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸಂಕಲ್ಪ ಮಾಡಬೇಕೆಂದು ರಾಮಪ್ಪ ಮನವಿ ಮಾಡಿದರು.
ಅನಂತ್‌ನಾಯ್ಕ ಮಾತನಾಡಿ, ನಾನು ಟಿಕೆಟ್ ಬಯಸಿ ಕಾಂಗ್ರೆಸ್ ಸೇರಿಲ್ಲ. ಕಾಂಗ್ರೆಸ್ ತತ್ವ, ಸಿದ್ದಾಂತ ಒಪ್ಪಿ ಬಂದಿದ್ದೇನೆ. ನಾನು ಭಾನುವಳ್ಳಿ ಜಿ.ಪಂ. ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡರಾದ ವೈ. ವಿರೂಪಾಕ್ಷಪ್ಪ, ಎಸ್.ಜಿ. ಪರಮೇಶ್ವರಪ್ಪ, ಜಿಗಳಿ ಆನಂದಪ್ಪ, ಗಂಗನರಸಿ ನಾಗೇಂದ್ರಯ್ಯ, ಕೆ.ಬಿ. ಬಸವರಾಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ, ಎಲ್.ಬಿ. ಹನುಮಂತಪ್ಪ, ಯಲವಟ್ಟಿಯ ಅಜ್ಜನಾಯ್ಕ ಮಾತನಾಡಿದರು.
ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಸ್. ಹನುಮಂತಪ್ಪ, ಯಲವಟ್ಟಿಯ ಖಲಂದರ್, ಚಮನ್‌ಸಾಬ್, ಹೊರಟ್ಟಿ ರಾಜು, ಮಲೇಬೆನ್ನೂರಿನ ಪಿ.ಆರ್.ಕುಮಾರ್ ಇನ್ನಿತರರಿದ್ದರು.