ದಾವಣಗೆರೆ, ಮಾ. 27 – ನಗರದಲ್ಲಿ ಸೀಟು ಆಟೋಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಇದರಲ್ಲಿ ದರ ಪ್ರಮಾಣ ಕಡಿಮೆ ಎಂದು ತಮ್ಮ ಜೀವಗಳನ್ನು ಲೆಕ್ಕಿಸದೇ ನಿತ್ಯ ಪ್ರಯಾಣಿಸುತ್ತಿದ್ದಾರೆ. ಸಿಗ್ನಲ್ ಜಂಕ್ಷನ್‌ಗಳಲ್ಲಿ ಸಿಗ್ನಲ್ಲನ್ನು ಲೆಕ್ಕಿಸದೇ ಸಿಗ್ನಲ್ ಜಂಪ್ ಮಾಡುತ್ತಿರುವುದು ತೀರಾ ವಿಷಾದಕರ ಸಂಗತಿ ಆಗಿರುತ್ತದೆ.
ಮೋಟಾರ್ ವಾಹನಗಳ ಕಾಯ್ದೆಯು ಕೇವಲ ಆಟೋದಲ್ಲಿ 3 + 1 ಪ್ರಯಾಣಿಕರನ್ನು ಕೂರಿಸಿಕೊಂಡು ಹೋಗುವ ಆಟೋ ಚಾಲಕರಿಗೆ ಮಾತ್ರ ಅನ್ವಯವಾಗುತ್ತದೆಯೇ? ಎಂಬುದು ನಗರದ ಹಲವಾರು ಆಟೋ ಚಾಲಕರ ನಿತ್ಯ ಪ್ರಶ್ನೆ ಆಗಿರುತ್ತದೆ. ಸುಮಾರು 15 ಜನಗಳ ತನಕವೂ ಕುರಿಗಳನ್ನು ತುಂಬಿಸಿಕೊಂಡು ಹೋಗುವ ಹಾಗೇ ಇರುವ ಸೀಟು ಆಟೋಗಳ ಚಾಲಕರಿಗೆ ಮೋಟಾರು ವಾಹನಗಳ ಕಾಯ್ದೆಯು ಅನ್ವಯ ಆಗುವುದಿಲ್ಲವೇ? ಎಂದು ವ್ಯಂಗ್ಯವಾಗಿ ಮಾತನಾಡಿಕೊಳ್ಳುತ್ತಿರುವುದು ಸಾಮಾನ್ಯ ವಿಚಾರವಾಗಿದೆ.
ಪ್ರಮುಖವಾಗಿ ಕಾನೂನನ್ನು ಗೌರವಿಸಬೇಕು. ಇದಕ್ಕಿಂತ ಹೆಚ್ಚಾಗಿ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಬೇಕು. ಈ ಜವಾಬ್ದಾರಿಯನ್ನು ಹೊರುವವರು ಯಾರು ? ಸೀಟು ಆಟೋಗಳಿಗೆ ಲಗಾಮು ಹಾಕಬೇಕಾದ ಅಧಿಕಾರಿಗಳು ಮೌನವಾಗಿರುವುದು ತೀರಾ ಬೇಸರದ ಸಂಗತಿ ಆಗಿದೆಯೆಂದು ಜೈ ಕರ್ನಾಟಕ ಮಾತೆ ಆಟೋ ನಿಲ್ದಾಣದ ನಿತ್ಯ ಆಟೋ ಚಾಲಕರಾದ ಹೆಚ್.ಟಿ. ವಿಠ್ಠಲ್, ಬಿ.ಹೆಚ್. ರಂಗಶೆಟ್ಟಿ, ಹೆಚ್.ಎಸ್. ಶಿವಕುಮಾರ್ ಮತ್ತು ಮಾಂತೇಶ್ ತಮ್ಮ ಅಹವಾಲನ್ನು ತಿಳಿಸಿರುತ್ತಾರೆ. ಈ ಸೀಟು ಆಟೋಗಳ ನಿತ್ಯ ಹಾವಳಿಯಿಂದ ಕಾನೂನು ಸ್ವಚ್ಚವಾಗಿ ಪರಿಪಾಲಿಸುವ ಆಟೋ ಚಾಲಕರ ಬದುಕಿಗೆ ಅಕ್ಷರಶಃ ಪೆಟ್ಟು ಬಿದ್ದಿರುವುದು ವಿಷಾದದ ಸಂಗತಿ ಆಗಿರುತ್ತದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಅಂಶಗಳನ್ನು ಪರಿಗಣಿಸಿ ಕಾನೂನಿನಲ್ಲಿ ಇರುವ ಹಾಗೇ 3+1 ಪ್ರಯಾಣಿಕರನ್ನು ಮಾತ್ರ ಆಟೋದಲ್ಲಿ ಕೂರಿಸಿಕೊಂಡು ಆಟೋ ಚಲಾಯಿಸುವ ಆಟೋ ಚಾಲಕರಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.