ಚಿತ್ರದುರ್ಗ, ಮಾ.19- ಇತಿಹಾಸ ಪ್ರಸಿದ್ಧವಾದ ಚಂದ್ರವಳ್ಳಿಯ ಕೆರೆಯ ಪರಿಸರದಲ್ಲಿ ಒಂದು ಅಪರೂಪದ ಸ್ತ್ರೀ ಪ್ರತಿಮೆಯನ್ನು ನಿವೃತ್ತ ಇಂಜಿನಿಯರ್ ಚಂದ್ರಶೇಖರಪ್ಪ ಗುಂಡೇರಿ ಪತ್ತೆ ಮಾಡಿದ್ದಾರೆ. ವಾಯು ವಿಹಾರಕ್ಕಾಗಿ ಚಂದ್ರವಳ್ಳಿ ಪ್ರದೇಶಕ್ಕೆ ಹೋದಾಗ ಮನುಷ್ಯ ಸಂಚಾರವಿಲ್ಲದ ಒಡ್ಡಿನ ಬಳಿಯ ಜಾಗದಲ್ಲಿ ಸ್ವಚ್ಛಗೊಳಿಸುವ ವೇಳೆ ಪ್ರತಿಮೆ ದೊರಕಿದೆ.
ಶಾಸನ ಸಂಶೋಧಕ ಡಾ.ಬಿ. ರಾಜಶೇಖರಪ್ಪನವರ ಗಮನಕ್ಕೆ ತಂದಾಗ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ, ವಿಜಯನಗರ ಕಾಲದ ಒಂದು ಅಪರೂಪದ ಪ್ರತಿಮೆ ಎಂದು ಗುರುತಿಸಿದ್ದಾರೆ.
ಮುರುಘಾಶ್ರೀ ವಸ್ತು ಸಂಗ್ರಹಾಲಯದ ಅಧಿಕಾರಿ ಶಂಕರ ಅಥಣಿ ಅವರನ್ನು ಸಂಪರ್ಕಿಸಿ ಸಂಗ್ರಹಾಲಯಕ್ಕೆ ನೀಡಿರುತ್ತಾರೆ. ನರ್ತಕಿಯ ಪ್ರತಿಮೆ ಬಹಳ ಸುಂದರವಾಗಿದೆ. ಎಡಗೈ ಭಗ್ನವಾಗಿದ್ದು, ಆ ಭಗ್ನವಾದ ಕೈ ಅದರ ಜೊತೆಯಲ್ಲಿ ಲಭ್ಯವಾಗಿದ್ದು ಅದನ್ನು ಮುಂದೆ ಜೋಡಿಸಬಹುದು ಎಂದು ಶಂಕರ ಅಥಣಿ ತಿಳಿಸಿದ್ದಾರೆ.