ಹರಪನಹಳ್ಳಿ, ಮಾ.19- ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯ ಸರಿಯಾಗಿದ್ದರೆ ಮಾತ್ರ ಶೈಕ್ಷಣಿಕ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಡಾ. ವಿಶ್ವಾರಾಧ್ಯ ಹೇಳಿದರು.
ಪಟ್ಟಣದ ಎಡಿಬಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹುತೇಕ ವಿದ್ಯಾರ್ಥಿಗಳಲ್ಲಿ ತಲೆ ನೋವಿನ ಸಮಸ್ಯೆ ಕಂಡು ಬರುತ್ತಿದೆ. ಆಹಾರ ಕ್ರಮ ಹಾಗೂ ದಿನನಿತ್ಯ ವ್ಯಾಯಾಮ ಇಲ್ಲದೇ ತೊಂದರೆಗಳಿಗೆ ಕಾರಣವಾಗುತ್ತದೆ. ಟಿವಿ ಮತ್ತು ಮೊಬೈಲ್‌ಗಳ ಬಳಕೆಯಿಂದ ವಿದ್ಯಾರ್ಥಿಗಳು ಜೀವನದ ಶಿಸ್ತು ಮರೆಯುತ್ತಿದ್ದಾರೆ. ಸದೃಢ ದೇಹದಲ್ಲಿ ಸದೃಢ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಡಾ. ಎಸ್. ಎಂ. ಸಿದ್ಧಲಿಂಗ ಮೂರ್ತಿ ಮಾತನಾಡಿ, ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ. ಆದರೆ ಆರೋಗ್ಯ ಕೈಕೊಟ್ಟಾಗ ದುಡಿದ ಹಣ ಒಯ್ದು ಆಸ್ಪತ್ರೆಗೆ ಸುರಿಯುತ್ತೇವೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾ ಘಾತದಂತಹ ರೋಗಗಳು ಹೆಚ್ಚುತ್ತಿವೆ. ಆರೋಗ್ಯ ದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಜಂಕ್‌ಫುಡ್ ತಿನ್ನದೇ ಸಮತೋಲನ ಆಹಾರ ಸೇವನೆ ಮಾಡಿ ಉತ್ತಮ ಆರೋಗ್ಯ ಹೊಂದಬೇಕು. ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವು ದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮ ಅಧಿಕಾರಿಗಳಾದ ಡಾ. ಎ.ಎಂ. ರಾಜಶೇಖರಯ್ಯ ಹಾಗೂ ಡಾ. ಅಣ್ಣೀಶಿ, ಕಛೇರಿ ಅಧೀಕ್ಷಕರಾದ ಎನ್. ಕಲ್ಪನಾ, ಡಾ. ಆಶಾ ಸೇರಿದಂತೆ ಇತರರು ಇದ್ದರು.