ದಾವಣಗೆರೆ, ಮಾ.18- ಅಂತರ್ ಜಿಲ್ಲಾ ಮನೆಗಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ ಹದಡಿ ಠಾಣೆಯ ಪೊಲೀಸರು 10.32 ಲಕ್ಷ ರೂ. ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿದ್ದಾರೆ. ರಾಣೇಬೆನ್ನೂರಿನ ಮುಬಾರಕ್, ಹರಪನಹಳ್ಳಿಯ ಸಾದತ್ ಬಂಧಿತ ಆರೋಪಿಗಳಾಗಿದ್ದು, ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಂಧಿತರ 5 ಪ್ರಕರಣಗಳಿಂದ 7.20 ಲಕ್ಷ ರೂ. ಬೆಲೆಯ 91.00 ಗ್ರಾಂ ತೂಕದ ಬಂಗಾರದ ಆಭರಣಗಳು, 4 ಸಾವಿರ ರೂ ಬೆಲೆಯ 50 ಗ್ರಾಂ ತೂಕದ ಬೆಳ್ಳಿ ಆಭರಣಗಳು, 58 ಸಾವಿರ ನಗದು, ಬುಲೆಟ್ ಬೈಕ್ ಹಾಗೂ ಕಳ್ಳತನ ಮಾಡಲು ಬಳಸುತ್ತಿದ್ದ ಸುಜಿಕಿ ಆಕ್ಸಸ್ 125ಸಿಸಿ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ.
ಕುಕ್ಕುವಾಡ ಗ್ರಾಮದ ಬಿ.ಟಿ ಮಧು ಅವರು ಫೆ.17ರಂದು ತಮ್ಮ ಮನೆ ಕಳ್ಳತನವಾದ ಕುರಿತು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳು 15ಕ್ಕೂ ಅಧಿಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇವರ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.