`ಪೊಲೀಸರೊಂದಿಗೆ ಮ್ಯಾರಥಾನ್’ಗೆ ಹೆಜ್ಜೆ ಹಾಕಿದ ಸಾರ್ವಜನಿಕರು
ದಾವಣಗೆರೆ, ಮಾ. 9- ನಗರದಲ್ಲಿ ಭಾನುವಾರ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷಣೆ ಯಡಿ ‘ಪೊಲೀಸರೊಂದಿಗೆ ಮ್ಯಾರಥಾನ್’ ನಡೆಯಿತು.
ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ 10,000 ಮೀಟರ್ ಮ್ಯಾರಥಾನ್ ಡೆಂಟಲ್ ಕಾಲೇಜು ರಸ್ತೆ, ಗುಂಡಿ ವೃತ್ತ, ಶಾಮನೂರು ರಸ್ತೆ, ಜಯದೇವ ವೃತ್ತದ ಮೂಲಕ ಕ್ರೀಡಾಂಗಣ ತಲುಪಿತು. 5,000 ಮೀ. ಮ್ಯಾರಥಾನ್ ಹದಡಿ ರಸ್ತೆ, ಎಆರ್ಜಿ ಕಾಲೇಜು, ನೂತನ ಕಾಲೇಜು ರಸ್ತೆ ಮೂಲಕ ಕ್ರೀಡಾಂಗಣಕ್ಕೆ ಮರಳಿತು.
ಇಬ್ಬನಿಯಿಂದ ಕೂಡಿದ ಮುಂಜಾವಿನಲ್ಲಿ 10,000 ಮೀಟರ್ ಹಾಗೂ 5,000 ಮೀಟರ್ ವಿಭಾಗದಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರೂ ಹೆಜ್ಜೆ ಹಾಕಿದರು ಹೆಜ್ಜೆ ಹಾಕಿದರು.
ಮ್ಯಾರಥಾನ್ಗೆ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದ ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಅವರು, ರಾಗಿ ಮುದ್ದೆ, ರೊಟ್ಟಿ ಬಿಟ್ಟು ಪಿಜ್ಜಾ, ಬರ್ಗರ್ಗೆ ಮೊರೆ ಹೋಗಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲರೂ ಸೇರಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ
ಜನರ ಪ್ರತಿಯೊಂದು ಸಮಸ್ಯೆಗಳಿಗೂ ಪೊಲೀಸರು ಬೇಕು. ಆದರೆ ಅಂತರಂಗದೊಳಗೆ ನಾವು ಬೇಡವಾಗಿದ್ದೇವೆ. ನಾವೂ ಮನುಷ್ಯರೇ, ನೀವು ಮನುಷ್ಯರೇ. ನಾವು ಸಮವಸ್ತ್ರ ಹಾಕಿಕೊಂಡು ಸಮಾಜ ಸೇವೆ ಮಾಡಿದರೆ, ನೀವು ನಾಗರಿಕರಾಗಿ ಸಮಾಜ ಸೇವೆ ಮಾಡ್ತೀರಿ ಅಷ್ಟೇ ವ್ಯತ್ಯಾಸ. ಎಲ್ಲರೂ ಸೇರಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ನಾಗರಿಕರಲ್ಲಿ ಮನವಿ ಮಾಡಿದರು.
ಸಮಾಜದಲ್ಲಿ ಪೊಲೀಸರ ಬಗ್ಗೆ ಭಯ ಇದೆ. ಆದರೆ, ನಂಬಿಕೆ ಇಲ್ಲ. ಪೊಲೀಸರೊಂದಿಗೆ ಜನರು ಕೈಜೋಡಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಪೊಲೀಸರು ಮತ್ತು ಜನರಲ್ಲಿ ನಂಬಿಕೆ, ಉತ್ತಮ ಬಾಂಧವ್ಯ ಬೆಸೆಯುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವತಿಯಿಂದ ‘ಡ್ರಗ್ಸ್ ಮುಕ್ತ ಸಮಾಜ, ಮಹಿಳೆಯರ ಸುರಕ್ಷತೆಯ ಸಮಾಜ, ಸೈಬರ್ ಕ್ರೈಂ ಮುಕ್ತ ಸಮಾಜ, ಅಪರಾಧ ಮುಕ್ತ ಸಮಾಜ’ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಎಸ್ಪಿ ಉಮಾ ಪ್ರಶಾಂತ್ ಅವರು ಬಹಳ ಅಚ್ಚುಕಟ್ಟಾಗಿ ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಿಳೆಯರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಮಹಿಳೆಯರನ್ನು ಗೌರವಿಸುವುದು ಮುಖ್ಯವಾಗಿದೆ. ಇದನ್ನು ಪುನಃ ಪುನಃ ನೆನಪಿಸುವ ಮೂಲಕ ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಎಸ್ಪಿ ಉಮಾ ಪ್ರಶಾಂತ್ ಪ್ರತಿಜ್ಞಾ ವಿಧಿ ಬೋಧಿಸಿದರು. ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ್ ಎಂ.ಸಂತೋಷ್, ಜಿ.ಮಂಜುನಾಥ್, ಡಿವೈಎಸ್ಪಿಗಳಾದ ಶರಣ ಬಸವೇಶ್ವರ ಭೀಮರಾವ್, ಬಸವರಾಜ್, ಪ್ರಕಾಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ಕುಮಾರ್ ಸೇರಿದಂತೆ ಇತರರಿದ್ದರು.