ನೂತನ ವಿದ್ಯಾಸಂಸ್ಥೆ ಅಧ್ಯಕ್ಷ ಎನ್. ಪರಶುರಾಮನಗೌಡ
ದಾವಣಗೆರೆ, ಮಾ.10- ಮಹಿಳೆಯರ ಸಬಲೀಕರಣವು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದಿಂದ ಆರ್ಥಿಕ ಸ್ವಾವಲಂ ಬನೆಯನ್ನು ಸಾಧಿಸಲಾಗುವುದು ಎಂದು ನೂತನ ವಿದ್ಯಾಸಂಸ್ಥೆ ಅಧ್ಯಕ್ಷ ಪರಶುರಾಮನಗೌಡ ಹೇಳಿದರು.
ನಗರದ ನೂತನ ವಿದ್ಯಾಸಂಸ್ಥೆಯಲ್ಲಿ ನಿನ್ನೆ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯು ಶಿಕ್ಷಣವನ್ನು ಪಡೆಯುವುದರ ಮೂಲಕ ಒಂದು ಕುಟುಂಬವನ್ನು ಸುಶಿಕ್ಷಿತ ಗೊಳಿಸಬಹುದು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂತೆಬೆನ್ನೂರಿನ ಸರ್ಕಾರಿ ಪ್ರ.ದ. ಕಾಲೇಜಿನ ಸಹ ಪ್ರಾಧ್ಯಾಪಕರಾದ ಶ್ರೀಮತಿ ಜ್ಯೋತಿ ಟಿ.ಬಿ. ಅವರು ಮಾತನಾಡಿ, `ಯತ್ರ ನಾರೇಂತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎಂಬ ಮನುವಿನ ವಾಕ್ಯದಂತೆ ಎಲ್ಲಿ ಹೆಣ್ಣನ್ನು ಪೂಜಿಸುತ್ತಾರೋ ಅಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆ ಎಂದು ಹೇಳಿದರು.
ಕಬೀರ ಸಾಕ್ಷ್ಯಚಿತ್ರದಲ್ಲಿ ಒಂದು ಹೆಣ್ಣಿಗೆ ಆಗಿರುವ ಶೋಷಣೆಯನ್ನು ತಿಳಿಸುವುದರ ಮೂಲಕ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೂತನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ದಿವಾಕರ ನಾಯ್ಕ್ ಕೆ.ಎಸ್. ಮಾತನಾಡಿ, ಹೆಣ್ಣಿನೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುವುದು ಅಪರಾಧ ಎಂದು ತಿಳಿಸಿದರು.
ಪ್ರಶಿಕ್ಷಣಾರ್ಥಿ ಶ್ರೀಮತಿ ಸುಶ್ಮಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕು. ಮಾಳ್ಗೇರ ಸೌಂದರ್ಯ ಅತಿಥಿ ಗಳನ್ನು ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ನಿರ್ಮಲ ಆರ್. ಮಾತನಾಡಿದರು.
ಕು. ಡಿ.ಬಿ. ರೇಖಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರೆ, ಕು. ಬಿ.ಬಿ. ಗಂಗಮ್ಮ ವಂದಿಸಿದರು. ಕು. ರಾಧಿಕಾ ವಿ.ಎಲ್. ಕಾರ್ಯಕ್ರಮ ನಿರೂಪಿಸಿದರು.