ದಾವಣಗೆರೆ, ಫೆ. 17- ಬಾಲ್ಯ ದಿಂದಲೂ ಕುತೂಹಲ, ವಿಜ್ಞಾನದಲ್ಲಿ ಆಸಕ್ತಿ, ಇಸ್ರೋದೊಡನೆ ನಿರಂತರ ಸಂಪ ರ್ಕದ ಪ್ರತಿಫಲವಾಗಿ ನಗರದ ಸಿದ್ಧಗಂಗಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ದೀಪಕ್ ಜಿ.ಕೆ. ಈಚೆಗೆ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ `ಜ್ಯೂನಿಯರ್ ಸೈಂಟಿಸ್ಟ್ ಪ್ರಶಸ್ತಿ’ಪಡೆದಿದ್ದಾನೆ.
6ನೇ ತರಗತಿಯಲ್ಲಿದ್ದಾಗ ಭಾರತದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ದವರು ನಡೆಸಿದ `ಪ್ಯೂರಿಫೈ ದ ಅರ್ಥ್’ ಸ್ಪರ್ಧೆಯಲ್ಲಿ ದೀಪಕ್ ಭಾಗವಹಿಸಿ ಸಮಾಧಾನಕರ ಬಹುಮಾನ ಪಡೆದಿದ್ದು, ಇಸ್ರೋದ ಕಾರ್ಯನಿರ್ವಾಹಕ ಅಧಿಕಾರಿ ಸರ್ ಕೌಸ್ತುಬ್ ರವರ ಪರಿಚಯ ಮತ್ತು ಮಾರ್ಗದರ್ಶನದಿಂದ `ಗ್ರಿಪ್ಪರ್ ಎಕ್ಸ್ ಪ್ಲೊರೇಷನ್’ ಕಂಡು ಹಿಡಿದಿದ್ದಾರೆ.
ರಾಕೆಟ್ ಉಡಾವಣೆಯಲ್ಲಿ ಪ್ರಮುಖ ಪಾತ್ರ ಲ್ಯಾಂಡರ್ ಎಂದರಿತ ಬಾಲಕ ದೀಪಕ್ `ಲ್ಯಾಂಡರ್ ಗ್ರಿಪ್ಪರ್’ ಮೇಲೆ ತನ್ನ ಅಧ್ಯಯನ ಕೇಂದ್ರೀಕರಿಸಿ ಸಂಶೋಧನೆ ಪ್ರಾರಂಭಿಸಿದನು. ಗ್ರಿಪ್ಪರ್ ಜೊತೆ ಸೆನ್ಸಾರ್ ಜೋಡಿಸಿದಾಗ ಅದು ವಿಫಲವಾಗಿದ್ದನ್ನು ಕಂಡು ಗ್ರಿಪ್ಪರ್ ಜೊತೆ `ಬ್ಲೂಟೂತ್ ಮೆಮೊರಿ ಸ್ಪೆನ್ಸರ್’ ಉಪಯೋಗಿಸಿದಾಗ `ಲ್ಯಾಂಡರ್ ಗ್ರಿಪ್ಪರ್’ ಸಫಲವಾಯಿತು. ಈ ಪ್ರಯತ್ನ ವನ್ನು ಇಸ್ರೋಗೆ ಅಂತರ್ಜಾಲದಲ್ಲಿ ಕಳಿಸಿಕೊಟ್ಟಾಗ ಇಸ್ರೋ ಮುಖ್ಯಸ್ಥರು ಒಪ್ಪಿಗೆ ಸೂಚಿಸಿ, ಲ್ಯಾಂಡರ್ ಗ್ರಿಪ್ಪರ್ ಮಾದರಿ ಮಾಡಲು ಸೂಚಿಸಿದರು. ಈ ಸಂಶೋಧನೆಯನ್ನು 23 ದಿನಗಳ ಕಾಲ ಪರಿಶೀಲಿಸಿ ಅಂತಿಮವಾಗಿ ಜನವರಿ 25ರಂದು `ಜ್ಯೂನಿಯರ್ ಸೈಂಟಿಸ್ಟ್’ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ.
ದೀಪಕ್, ಕೆಎಸ್‌ಆರ್‌ಟಿಸಿಯ ಕಂಡಕ್ಟರ್ ದಂಪತಿ ಗಂಗಾಧರ ಮತ್ತು ರಾಜೇಶ್ವರಿ ಸುಪುತ್ರ.