ಗ್ರಾಮೀಣ ಮಹಿಳೆಯರಿಗೆ ಉಚಿತ ಕಾಲೇಜು ಶಿಕ್ಷಣ ಶ್ಲ್ಯಾಘನೀಯ

ಗ್ರಾಮೀಣ ಮಹಿಳೆಯರಿಗೆ ಉಚಿತ ಕಾಲೇಜು ಶಿಕ್ಷಣ ಶ್ಲ್ಯಾಘನೀಯ

ಅತ್ತಿಗೆರೆ ಚನ್ನಪ್ಳ ಕಾಲೇಜಿನ ಕಾರ್ಯಕ್ರಮದಲ್ಲಿ ಲೇಖಕ ಡಾ. ಗಂಗಾಧರಯ್ಯ ಹಿರೇಮಠ

ದಾವಣಗೆರೆ, ಫೆ. 14- ದೇಶದಲ್ಲಿ ಮಹಿಳಾ ಸಾಕ್ಷರತೆ ಕಡಿಮೆ ಇದ್ದು, ಅದರಲ್ಲೂ ಗ್ರಾಮೀಣ ಮಹಿಳೆಯರ ಕಾಲೇಜು ಶಿಕ್ಷಣ ಕ್ಕೆ ಸೇರುವ ಅನುಪಾತ ತುಂಬಾನೇ ಕಡಿಮೆಯಿದ್ದು, ಇಂತಹ ಸಂದರ್ಭದಲ್ಲಿ ದಾವಣಗೆರೆ ತಾಲ್ಲೂಕು ಅತ್ತಿಗೆರೆ ಗ್ರಾಮದ ಎಸ್.ಸಿ.ಎಸ್.ಜಿ ಪದವಿಪೂರ್ವ ಕಾಲೇಜು ಗ್ರಾಮೀಣ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದ್ದು. ಈ ಮಹತ್ವಪೂರ್ಣ ಶಿಕ್ಷಣ ದಾಸೋಹ ಕಾರ್ಯ ಶ್ಲ್ಯಾಘನೀಯ ಎಂದು ವಿಶ್ರಾಂತ ಪ್ರಾಧ್ಯಾಪಕ ಡಾ. ಗಂಗಾಧರಯ್ಯ ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ತಿಗೆರೆಯ ಶ್ರೀಮತಿ ಚನ್ನಪ್ಳ ಶಿವಲಿಂಗಮ್ಮ ಗುರುಬಸಪ್ಪ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ವೈಭವ್-2025ರ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು  ಅವರು ಮಾತನಾಡುತ್ತಿದ್ದರು.

ಶಿಕ್ಷಣ ವ್ಯಾಪಾರೀಕರಣವಾಗಿ, ಹಣ ಗಳಿಸುವ ದಂಧೆಯಾಗಿ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹ ವ್ಯಾಪಾರೀಕರಣ  ಶೈಕ್ಷಣಿಕ ವ್ಯವಸ್ಥೆಯಲ್ಲಿ ಅತ್ತಿಗೆರೆ ಗ್ರಾಮದಲ್ಲಿರುವ ಎಸ್.ಸಿ.ಎಸ್.ಜಿ. ಪದವಿಪೂರ್ವ ಕಾಲೇಜು ಗ್ರಾಮೀಣ ವಿದ್ಯಾರ್ಥಿನಿಯರಿಗೆ ಎರೆಡು ವರ್ಷ ಉಚಿತ ಶಿಕ್ಷಣ ನೀಡಿ ಅವರನ್ನು ಮುಂದಿನ ಪದವಿ ಶಿಕ್ಷಣವನ್ನು ಪಡೆಯಲು ಕಳಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ತಿಳಿಸಿದರು.

ಕಾಲೇಜು ಸಂಸ್ಥಾಪಕ ಕಾರ್ಯದರ್ಶಿ  ಪ್ರೊ. ಕೆ.ಆರ್.ಸಿದ್ದಪ್ಪ ಮಾತನಾಡಿ, ತಾವು ಈ ಸಂಸ್ಥೆ ಕೊಟ್ಟಿರುವ ಉದ್ದೇಶ, ಆಶಯ ಮತ್ತು ತಾವು ಅನುಭವಿಸಿದ ನೋವುಗಳು, ಸವಾಲುಗಳ ಕುರಿತು ವಿವರವಾಗಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೊ.ಹೆಚ್. ಚೆನ್ನಪ್ಪ ಪಲ್ಲಾಗಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಹೆಚ್.ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಬಿ.ಎಸ್. ಸಲ್ಮಾ ಸ್ವಾಗತಿಸಿದರು. ಪ್ರೊ. ಗುಡ್ಡಪ್ಪ ಆರ್. ಓಲೇಕಾರ್ ವರದಿ ವಾಚಿಸಿದರು. ಪ್ರೊ. ಕೆ.ಎಂ. ಬಸವರಾಜಪ್ಪ ವಂದಿಸಿದರು.

error: Content is protected !!