ಇ. ಎಂ. ಮಂಜುನಾಥ
ಅವಿಭಜಿತ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಪ್ರಥಮ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಾವಣಗೆರೆ ಅರ್ಬನ್ ಕೋ – ಆಪರೇಟಿವ್ ಬ್ಯಾಂಕ್ ಕರ್ನಾಟಕ ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲೊಂದಾಗಿದ್ದು, ತಾನು ಹೊಂದಿರುವ ಪ್ರಧಾನ ಕಛೇರಿ ಸೇರಿದಂತೆ 7 ಶಾಖೆಗಳ ಜೊತೆಗೆ ಇದೀಗ 8ನೇ ಶಾಖೆಯನ್ನು ಕಾರ್ಯಾರಂಭ ಮಾಡುತ್ತಿದೆ.
ಸ್ಥಾಪನೆ : ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗಾಗಿ ಸಮಾನತೆಯ ನೆಲೆ ಮತ್ತು ಸಹಕಾರದ ನಿಟ್ಟಿನಲ್ಲಿ ವರ್ತಕರು ಹಾಗೂ ಸಾಮಾಜಿಕ ಸೇವಾ ಮನೋಭಾವ ಹೊಂದಿದ್ದ ಮಹನೀಯರು ಒಟ್ಟಾಗಿ ಸೇರಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಕೆ. ಲಕ್ಷ್ಮಣರಾವ್ ಅವರ ಮಾರ್ಗದರ್ಶನ ಮತ್ತು ಸಹಕಾರಿ ಧುರೀಣರಾಗಿದ್ದ ಡಾ. ಎಸ್. ಕೊಟ್ರಬಸಪ್ಪ ಅವರ ನೇತೃತ್ವದಲ್ಲಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪನೆಗೊಂಡಿತ್ತು.
ಈ ಬ್ಯಾಂಕ್ ಸ್ಥಾಪನೆ ಸಂಬಂಧ 1961, ನವೆಂಬರ್ 25ರಂದು ಪ್ರಾರಂಭಿಕ ಸಭೆ ನಡೆಯಿತಾದರೂ ಹಲವಾರು ಸಭೆಗಳ ನಂತರ ಅಧಿಕೃತವಾಗಿ 1962, ಫೆಬ್ರವರಿ 09ರಂದು ಅಂದಿನ ಹೆಸರಾಂತ ಕೈಗಾರಿಕೋದ್ಯಮಿಯಾಗಿದ್ದ ಧರ್ಮಪ್ರಕಾಶ ರಾಜನಹಳ್ಳಿ ಶ್ರೀ ರಾಮಶೆಟ್ಟರ ಅಮೃತ ಹಸ್ತದಿಂದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಕಾರ್ಯಾರಂಭ ಮಾಡಿತು. ಆರಂಭದ ದಿನಗಳಲ್ಲಿ ನರಸರಾಜಪೇಟೆಯಲ್ಲಿದ್ದ ಲಿಂ. ಧರ್ಮಪ್ರವರ್ತ ಹನಗವಾಡಿ ಮಠದ ಮುರುಗೆಯ್ಯನವರ ಕಟ್ಟಡದಲ್ಲಿ ಬ್ಯಾಂಕ್ ತನ್ನ ಚಟುವಟಿಕೆ ಆರಂಭಿಸಿತು. ನಂತರದ ದಿನಗಳಲ್ಲಿ ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದುವ ನಿಟ್ಟಿನಲ್ಲಿ ಪಿ.ಬಿ. ರಸ್ತೆಯ ಮಹಾತ್ಮ ಗಾಂಧಿ ವೃತ್ತದ ಬಳಿ ಸ್ಥಳಾಂತರಗೊಂಡಿತು.
ಶಾಖೆಗಳು : ಪ್ರಗತಿಯ ಪಥದಲ್ಲಿ ಮುನ್ನಡೆದಂತೆ ಮತ್ತು ಜನರ ಹತ್ತಿರಕ್ಕೆ ಬ್ಯಾಂಕ್ ಅನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಹಾಗೂ ಗ್ರಾಹಕರಿಗೆ ಶೀಘ್ರ ಸೇವೆ ಸಲ್ಲಿಸುವ ಸದುದ್ದೇಶದಿಂದ 1976ರಲ್ಲಿ ಮೊದಲ ಬಾರಿಗೆ ಚೌಕಿಪೇಟೆಯಲ್ಲಿ ಶಾಖೆಯನ್ನು ಆರಂಭಿಸಲಾಯಿತು. ಜನಸಂಖ್ಯೆಗನುಗುಣವಾಗಿ ಬಡಾವಣೆಗಳು ಬೆಳೆದಂತೆ ಆಯಾ ಭಾಗಕ್ಕೆ ಶಾಖೆಗಳನ್ನು ಸ್ಥಾಪಿಸಲಾಯಿತು. ಈ ಹಿನ್ನೆಲೆಯಲ್ಲಿ ಚೌಕಿಪೇಟೆ, ಪಿ.ಜೆ. ಬಡಾವಣೆ, ನರಸರಾಜಪೇಟೆ, ಆಡಳಿತ ಕಛೇರಿ, ಶ್ರೀ ಡಿ. ದೇವರಾಜ ಅರಸು ಬಡಾವಣೆ ಶಾಖೆಗಳು ರಚನೆಗೊಂಡವು. ಗ್ರಾಹಕರ ಒತ್ತಾಸೆಯ ಮೇರೆಗೆ ಹೊನ್ನಾಳಿಯಲ್ಲೂ ಶಾಖೆಯನ್ನು ಆರಂಭಿಸಲಾಯಿತು. ಈ ಎಲ್ಲಾ ಶಾಖೆಗಳು ಪ್ರಗತಿಯ ಮುಂಚೂಣಿಯಲ್ಲಿರುವುದು ಬ್ಯಾಂಕಿನ ಹಿರಿಮೆ. ಬಹುದಿನಗಳ ಗ್ರಾಹಕರ ಬೇಡಿಕೆಯಾಗಿದ್ದ ನಿಟುವಳ್ಳಿ ಶಾಖೆಯು ಸ್ವಂತ ಕಟ್ಟಡ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಇಂದು ಕಾರ್ಯಾರಂಭ ಮಾಡುತ್ತಿರುವುದು ಬ್ಯಾಂಕಿನ ಪ್ರತಿಷ್ಠೆಯನ್ನು ಹೆಚ್ಚಿಸಿದೆ.
ನಿಟುವಳ್ಳಿ ಶಾಖೆ ಇಂದು ಉದ್ಘಾಟನೆ
ನಿಟುವಳ್ಳಿಯ ಹೆಚ್.ಕೆ.ಆರ್. ಸರ್ಕಲ್ ಹತ್ತಿರದ ಸಿದ್ದರಾಮೇಶ್ವರ ಬಡಾವಣೆಯ 1ನೇ ಮುಖ್ಯ ರಸ್ತೆ, 1ನೇ ತಿರುವಿನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಿಟುವಳ್ಳಿ ಶಾಖೆಯ ಉದ್ಘಾಟನಾ ಸಮಾರಂಭವು ಇಂದು ಬೆಳಿಗ್ಗೆ 11.30ಕ್ಕೆ ನಡೆಯಲಿದೆ.
ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ನೂತನ ಶಾಖೆಯನ್ನು ಮತ್ತು ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್, ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಹಕಾರ ಸಂಘಗಳ ಉಪ ನಿಬಂಧಕ ಟಿ. ಮಧು ಶ್ರೀನಿವಾಸ್, ಸಹಾಯಕ ನಿಬಂಧಕರಾದ ಶ್ರೀಮತಿ ಎಸ್. ಮಂಜುಳಾ, ನಗರ ಪಾಲಿಕೆ ಸದಸ್ಯ ಜೆ.ಎನ್. ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಆರ್.ಹೆಚ್. ನಾಗಭೂಷಣ್, ನಿಟುವಳ್ಳಿಯ ಹಿರಿಯ ಮುಖಂಡ ಆರ್.ಎಸ್. ಶೇಖರಪ್ಪ ವಿಶೇಷ ಆಹ್ವಾನಿತರಾಗಿದ್ದಾರೆ.
ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಿ.ಸಿ. ಉಮಾಪತಿ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್ ಉಪಸ್ಥಿತರಿರುವರು.
ಬಾಪೂಜಿ ಮೆಡಿಕಲ್ ಕಾಲೇಜು ಮತ್ತು ಭದ್ರಾ ಸಕ್ಕರೆ ಕಾರ್ಖಾನೆ ಉದಯದಲ್ಲಿ ಬ್ಯಾಂಕಿನ ಪಾತ್ರ
ತನ್ನ ಸದಸ್ಯರು ಮತ್ತು ಗ್ರಾಹಕರಿಗೆ ಆರ್ಥಿಕ ಸಹಾಯ ನೀಡುವುದರ ಜೊತೆ-ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿಯೂ ಸಹಕಾರ ಹಸ್ತ ಚಾಚಿದ ಹೆಗ್ಗಳಿಕೆಯನ್ನು ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಹೊಂದಿದೆ.
`1965ರಲ್ಲಿ ಮಧ್ಯ ಕರ್ನಾಟಕದ ಪ್ರತಿಷ್ಠಿತ ಬಾಪೂಜಿ ವಿದ್ಯಾಸಂಸ್ಥೆಗೆ ಬ್ಯಾಂಕ್ ಗ್ಯಾರಂಟಿ’ ನೀಡುವುದರ ಮೂಲಕ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಲ್ಲಿ ಈ ಬ್ಯಾಂಕ್ ಪ್ರಮುಖ ಪಾತ್ರ ವಹಿಸಿದೆ.
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಕುಗಳ ಮಹಾಮಂಡಳದ ಉಗಮಕ್ಕೆ ಈ ಬ್ಯಾಂಕ್ ನಾಂದಿ ಯಾಗಿದೆ. ಸಹಕಾರ ಬ್ಯಾಂಕುಗಳ ಮಹಾಮಂಡಳದ ಪ್ರಾರಂಭ ಹಾಗೂ ಆರಂಭದ ಕಛೇರಿ ಈ ಬ್ಯಾಂಕಿನ ತಾಣವಾಗಿದ್ದು ಸ್ಮರಣೀಯ. ನಂತರ ದಿನಗಳಲ್ಲಿ ಮಹಾಮಂಡಳದ ಕಾರ್ಯವ್ಯಾಪ್ತಿಯು ವಿಸ್ತರಣೆ ಗೊಂಡ ಹಿನ್ನೆಲೆಯಲ್ಲಿ ಅದರ ಆಡಳಿತ ಕಛೇರಿ ನಾಡಿನ ರಾಜಧಾನಿ ಬೆಂಗಳೂರಿಗೆ ಸ್ಥಳಾಂತರ ಗೊಂಡಿತು. ಕರ್ನಾಟಕದ ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆ ಎಂದೇ ಹೆಸರಾಗಿರುವ ದೊಡ್ಡಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಗತಿ ಯಲ್ಲೂ ಈ ಬ್ಯಾಂಕಿನ ಸೇವೆ ಶ್ಲ್ಯಾಘನೀಯ. ಕಾರ್ಖಾನೆಯ ಸಂಘಕ್ಕೆ ಷೇರುದಾರರಾಗಲು ನೀಡಬೇಕಾಗಿದ್ದ ಐದು ಸಾವಿರ ರೂ. ಮೊತ್ತಕ್ಕೆ ಬ್ಯಾಂಕಿನ ಸದಸ್ಯರಿಗೆ ಸಾಲವಾಗಿ ನೀಡುವುದರ ಮೂಲಕ ಕಾರ್ಖಾನೆಯ ಉದಯಕ್ಕೆ ಸಹಕಾರ ನೀಡಿದೆ. ಅಲ್ಲದೇ, ದೇಶದ ವಿಪತ್ತುಗಳ ಸಮಯದಲ್ಲಿ ಅಂದರೆ, ಕಾರ್ಗಿಲ್ ಯುದ್ಧ, ಗುಜರಾತ್ನಲ್ಲಿ ಸಂಭವಿಸಿದ ಭೂಕಂಪ ಹಾಗೂ ಸುನಾಮಿ ಪೀಡಿತ ಪ್ರದೇಶಗಳೂ ಇತ್ಯಾದಿ ಬರ ಪೀಡಿತ ಪ್ರದೇಶಗಳಿಗೆ ನೆರವಾಗಲು ಈ ಬ್ಯಾಂಕ್ ಆರ್ಥಿಕ ಸಹಾಯವನ್ನು ಮಾಡಿದೆ.
– ಬಿ.ಸಿ. ಉಮಾಪತಿ, ಅಧ್ಯಕ್ಷರು, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್.
ರಾಷ್ಟ್ರೀಯ ಪ್ರಶಸ್ತಿ ಬ್ಯಾಂಕಿನ ಸದೃಢತೆಯ ಪ್ರತಿಬಿಂಬ
ಬ್ಯಾಂಕಿನ ಕಾರ್ಯ ನಿರ್ವಹಣೆ, ಬದ್ಧತೆ, ಸದಸ್ಯರ – ಗ್ರಾಹಕರ ಸೇವೆ ಅದರಲ್ಲೂ ಅತಿ ಹೆಚ್ಚು ಠೇವಣಿ ಸಂಗ್ರಹಕ್ಕೆ ದಾವಣಗೆರೆ ಅರ್ಬನ್-ಕೋ ಆಪರೇಟಿವ್ ಬ್ಯಾಂಕ್ ರಾಷ್ಟ್ರೀಯ ಅತ್ಯುನ್ನತ ಸಹಕಾರಿ ಬ್ಯಾಂಕ್ ಪ್ರಶಸ್ತಿಯನ್ನು ಸತತ 2 ಬಾರಿ ಪಡೆದಿರುವುದು ಈ ಬ್ಯಾಂಕಿನ ಸದೃಢತೆಯನ್ನು ಪ್ರತಿಬಿಂಬಿಸುತ್ತದೆ.
ಏವೀಸ್ ಪಬ್ಲಿಕೇಷನ್ (ಕೊಲ್ಲಾಪುರ) ಸಂಸ್ಥೆಯು ಭಾರತ ದೇಶದಲ್ಲಿನ ಸಹಕಾರ ಬ್ಯಾಂಕುಗಳನ್ನು ಮೂರು ವರ್ಗಗಳಲ್ಲಿ ವಿಂಗಡಿಸಿ ಪ್ರತಿ ವರ್ಗದಲ್ಲಿ ಅತ್ಯುನ್ನತ ಸಹಕಾರಿ ಬ್ಯಾಂಕ್ ಎಂದು ಗುರುತಿಸಿ, ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ 2022-2023ನೇ ಸಾಲಿನ 400-500 ಕೋಟಿ ರೂ. ಠೇವಣಿ ಹೊಂದಿರುವುದಕ್ಕೆ ಮೊದಲ ಬಾರಿಗೆ `ಬ್ಯಾಂಕೋ ಬ್ಲೂ ರಿಬ್ಬನ್’ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು. 2023 – 2024ಸಾಲಿನಲ್ಲಿ 500-550 ಕೋಟಿ ರೂ. ಠೇವಣಿ ಹೊಂದಿರುವುದಕ್ಕೆ ಎರಡನೇ ಬಾರಿಗೆ ಅದೇ ರಾಷ್ಟ್ರೀಯ ಪ್ರಶಸ್ತಿಯನ್ನು ಮತ್ತೆ ತನ್ನದಾಗಿಸಿ ಕೊಂಡ ಕೀರ್ತಿ ಹೊಂದಿದೆ.
ಈ ಪ್ರಶಸ್ತಿ ನೆಪಮಾತ್ರ ; ಅದರ ಹಿಂದೆ ಬ್ಯಾಂಕಿನ ಸದಸ್ಯರ – ಗ್ರಾಹಕರ ಸಹಕಾರ ; ಠೇವಣಿದಾರರ ಪ್ರೋತ್ಸಾಹ ; ಅಧಿಕಾರಿಗಳು – ಸಿಬ್ಬಂದಿ ವರ್ಗದವರ ಪ್ರಾಮಾಣಿಕತೆ -ಪರಿಶ್ರಮ ; ಆಡಳಿತ ಮಂಡಳಿ ಸದಸ್ಯರ ಇಚ್ಛಾಶಕ್ತಿ – ಬದ್ಧತೆ ಕಾರಣವಾಗಿದ್ದು, ಬ್ಯಾಂಕಿಗೆ ಸಂಬಂಧಿಸಿದ ಪ್ರತಿಯೊಬ್ಬರ ಅತ್ಯುತ್ತಮ ಕಾರ್ಯನಿರ್ವಹಣೆಯಿಂದಲೇ ಬ್ಯಾಂಕಿಗೆ ದೊರೆತ ಪ್ರಶಸ್ತಿ ಇದಾಗಿದೆ.
– ಟಿ.ಎಸ್. ಜಯರುದ್ರೇಶ್, ಉಪಾಧ್ಯಕ್ಷರು, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್
ಗ್ರಾಹಕರ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದ ಬ್ಯಾಂಕ್
ಸಹಕಾರ ತತ್ವದ ಅಂಶವಾಗಿರುವ `ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ’ ಎಂಬ ಮೂಲ ಅಂಶವನ್ನು ಗಮನದಲ್ಲಿ ರಿಸಿಕೊಂಡು ; ಕಳೆದ 5-6 ವರ್ಷಗಳ ಹಿಂದೆ ವಿಶ್ವವನ್ನೇ ತಲ್ಲಣಗೊಳಿಸಿದ ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ತನ್ನ ಗ್ರಾಹಕರಿಗೆ ಸ್ಪಂದಿಸುವುದರ ಮೂಲಕ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮಾನವೀಯತೆ ಮೆರೆದಿದೆ. ಅಂದಿನ ಬ್ಯಾಂಕಿನ ಕಾರ್ಯನಿರ್ವಾಹಕ ಮಂಡಳಿ ಸದಸ್ಯರು ತಮ್ಮ ಬ್ಯಾಂಕಿನ ಸದಸ್ಯರು – ಗ್ರಾಹಕರ ಹಿತಕ್ಕೋಸ್ಕರ ಸಾಲ ಪಡೆದವರಿಗೆ 6 ತಿಂಗಳ ಕಾಲ ಸಾಲದ ಬಡ್ಡಿಯ ಮೇಲೆ ಶೇ. 1ರಂತೆ ರಿಯಾಯಿತಿಯನ್ನು ನೀಡುವುದರ ಬಗ್ಗೆ ತೀರ್ಮಾನ ಕೈಗೊಂಡು ಸಹಕಾರ ನೀಡಿದ್ದರು. ಬ್ಯಾಂಕ್ವೊಂದರ ಈ ದಿಟ್ಟ ಕ್ರಮ ಬಹುಷಃ ರಾಜ್ಯದ ಅದರಲ್ಲೂ ದಾವಣಗೆರೆ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕ್ಗಳಲ್ಲೇ ಮೊಟ್ಟ ಮೊದಲು. ಇದು ಸಹಕಾರಿ ಕ್ಷೇತ್ರದಲ್ಲಿ ಲಾಭಗಳಿಕೆಯೊಂದೆ ಗುರಿಯಲ್ಲ ; ಮಾನವೀಯತೆಯೂ ಮುಖ್ಯ ಎನ್ನುವ ಅಂಶವನ್ನು ತೋರಿಸುತ್ತದೆ.
– ಕೋಗುಂಡಿ ಬಕ್ಕೇಶಪ್ಪ, ನಿಕಟಪೂರ್ವ ಅಧ್ಯಕ್ಷರು ಮತ್ತು ಹಾಲಿ ನಿರ್ದೇಶಕರು, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಅಧ್ಯಕ್ಷರು, ಡಿಡಿಸಿಸಿ ಬ್ಯಾಂಕ್, ದಾವಣಗೆರೆ.
ಸರ್ವತೋಮುಖ ಅಭಿವೃದ್ಧಿಯಲ್ಲಿ ಅಧಿಕಾರಿಗಳು : ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಹಾಗೂ ಸಂಪೂರ್ಣ ಗಣಕೀಕೃತವನ್ನಾಗಿ ಸುವ ದಿಸೆಯಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳ ಸೇವೆ ಶ್ಲ್ಯಾಘನೀಯ.
ಈ ಪೈಕಿ ಬ್ಯಾಂಕಿನ ಸಂಸ್ಥಾಪಕ ಕಾರ್ಯದರ್ಶಿ ಎ.ಎಂ. ಪ್ರಭುದೇವ್, ನಿವೃತ್ತ ಪ್ರಧಾನ ವ್ಯವಸ್ಥಾಪಕರುಗಳಾದ ಎಂ.ಸಿ. ವಿಜಯಕುಮಾರ್, ಎಂ. ಬಸವರಾಜಯ್ಯ, ಎಸ್.ಎಂ. ಕೊಟ್ರಯ್ಯ, ಬಿ. ನಾಗರಾಜಪ್ಪ, ಉಮೇಶ್ ಎಸ್. ರೋಣದ್, ಡಿ.ವಿ. ಆರಾಧ್ಯಮಠ ಅವರುಗಳ ಕಾರ್ಯ ನಿರ್ವಹಣೆ ಸ್ಮರಣೀಯ.
ಹಿಂದಿನ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಹಾಲಿ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್, ಉಪ ಪ್ರಧಾನ ವ್ಯವಸ್ಥಾಪಕ ಆರ್.ಎ. ಪ್ರಸನ್ನ, ಗಣಕ ಯಂತ್ರ ವಿಭಾಗದ ಮುಖ್ಯಸ್ಥ ಬಿ.ಎಸ್. ಪ್ರಶಾಂತ್ ಅವರುಗಳಲ್ಲದೇ ಹಾಗೂ ಸಿಬ್ಬಂದಿ ವರ್ಗದವರು, ಲಕ್ಷ್ಮೀ ಠೇವಣಿ ಸಂಗ್ರಹಕಾರರು ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಕಾರ್ಯ ನಿರ್ವಾಹಕ ಮಂಡಳಿಯ ಸೇವೆ ಮಾದರಿ : ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ತನ್ನ ಸುದೀರ್ಘ 63 ವರ್ಷಗಳ ಇತಿಹಾಸದಲ್ಲಿನ ಎಲ್ಲಾ ಆಡಳಿತ ಮಂಡಳಿಗಳ ಸದಸ್ಯರು ಬ್ಯಾಂಕಿನ ಅಭಿವೃದ್ಧಿಯಲ್ಲಿ ನಿರ್ವಹಿಸಿದ ಪಾತ್ರ ಮಾದರಿಯಾಗಿದ್ದು, ಪರಸ್ಪರ ಸೌಹಾರ್ದ, ಸಹಕಾರ ಮತ್ತು ಬದ್ಧತೆಯಿಂದಾಗಿ ಬ್ಯಾಂಕ್ ಪ್ರಗತಿಯ ಮುಂಚೂಣಿಯನ್ನು ಕಾಯ್ದುಕೊಳ್ಳಲಾಗಿದೆ.
ಬ್ಯಾಂಕಿನ ಹಾಲಿ ಅಧ್ಯಕ್ಷ ಬಿ.ಸಿ. ಉಮಾಪತಿ, ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್, ನಿರ್ದೇಶಕರುಗಳಾದ ಕೋಗುಂಡಿ ಬಕ್ಕೇಶಪ್ಪ, ಅಂದನೂರು ಮುಪ್ಪಣ್ಣ, ಪಲ್ಲಾಗಟ್ಟೆ ಶಿವಾನಂದಪ್ಪ, ಎಂ. ಚಂದ್ರಶೇಖರ್, ದೇವರಮನೆ ಶಿವಕುಮಾರ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಕಂಚಿಕೇರಿ ಮಹೇಶ್, ಇ.ಎಂ. ಮಂಜುನಾಥ, ವಿ. ವಿಕ್ರಂ, ಶ್ರೀಮತಿ ಎ.ಆರ್. ಅರ್ಚನಾ ಡಾ. ರುದ್ರಮುನಿ, ಹೆಚ್.ಎಂ. ರುದ್ರಮುನಿಸ್ವಾಮಿ, ಸೋಗಿ ಮುರುಗೇಶ್, ವೃತ್ತಿಪರ ನಿರ್ದೇಶಕ ರಾದ ಮುಂಡಾಸ್ ವೀರೇಂದ್ರ, ಮಲ್ಲಿಕಾರ್ಜುನ ಕಣವಿ ಅವರುಗಳು ಬ್ಯಾಂಕಿನ ಸ್ಥಾಪಕರು ಹೊಂದಿದ್ದ ಹಿತವನ್ನು ಗಮನದಲ್ಲಿರಿಸಿಕೊಂಡು ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಪಣ ತೊಟ್ಟಿದ್ದಾರೆ.