ದಾವಣಗೆರೆ, ಫೆ.2- ನಾಲೆಯಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ತಾಲ್ಲೂಕಿನ ಕುರ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಕುರ್ಕಿ ಗ್ರಾಮದ ಪಾಂಡು (16) ಹಾಗೂ ತುರ್ಚಘಟ್ಟ ಗ್ರಾಮದ ಯತೀಂದ್ರ (16) ಮೃತ ಬಾಲಕರು. ದಾವಣಗೆರೆಯ ಗುರುಕುಲ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇವರು, ರವಿವಾರ ಶಾಲೆಗೆ ರಜೆ ಇದ್ದಿದ್ದರಿಂದ ಕುರ್ಕಿ ಗ್ರಾಮದಲ್ಲಿರುವ ಸಲೂನ್ ಗೆ ಕಟಿಂಗ್ ಮಾಡಿಸಿಕೊಳ್ಳಲು ಬಂದಿದ್ದರು.
ಗ್ರಾಮದ ಬಳಿ ಹರಿಯುತ್ತಿರುವ ಭದ್ರಾ ಕಾಲುವೆಯಲ್ಲಿ ಪಾಂಡು ಮತ್ತು ಯತೀಂದ್ರ ಈಜಲು ಹೋಗಿದ್ದಾರೆ. ಈಜು ಬರುತ್ತಿದ್ದ ಪಾಂಡು ಕಾಲುವೆಗೆ ಜಿಗಿದು ಈಜಾಡುತ್ತಿದ್ದ. ನಂತರ ಈಜಲು ಬಾರದ ಯತೀಂದ್ರನೂ ಜಿಗಿದಿದ್ದಾನೆ. ಈ ವೇಳೆ ಯತೀಂದ್ರ ಮುಳುಗಿ ಏಳುತ್ತಿದ್ದಾಗ ಪಾಂಡು ಅವನನ್ನು ರಕ್ಷಿಸಲು ಹೋಗಿ ಇಬ್ಬರೂ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಬಾಲಕರು ಈಜುತ್ತಿದ್ದ ಸಮೀಪವೇ ಗೇಟ್ ಇದ್ದು, ಈ ಗೇಟ್ ಬಳಿ ಪಾಂಡು ಮೃತದೇಹ ಪತ್ತೆಯಾಗಿದೆ. ಯತೀಂದ್ರನ ಮೃತದೇಹ ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ನೀರು ಪಾಲಾದ ಬಾಲಕರ ಮೃತದೇಹ ಹೊರ ತೆಗೆಯಲು ಸಹಕರಿಸಿದ್ದಾರೆ.
ಬಾಲಕರು ನೀರು ಪಾಲಾದ ಸುದ್ದಿ ಹಬ್ಬುತ್ತಿದ್ದಂತೆ ಕುರ್ಕಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಬೈಕ್, ಕಾರು, ಟ್ರ್ಯಾಕ್ಟರ್ ಗಳಲ್ಲಿ ದೌಡಾಯಿಸಿದ್ದು, ಕಾಲುವೆ ಬಳಿ ಜನಸಾಗರ ಸೇರಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.