ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾರಥಿ ಬಿ.ವಾಮದೇವಪ್ಪ ಅವರೀಗ ಅಮೃತ ಪುರುಷ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಾರಥಿ  ಬಿ.ವಾಮದೇವಪ್ಪ ಅವರೀಗ ಅಮೃತ ಪುರುಷ

ಕನ್ನಡ ನಾಡು-ನುಡಿ, ನೆಲ-ಜಲ, ಕಲೆ-ಸಾಹಿತ್ಯ ಸಂಸ್ಕೃತಿಯ ಸೇವೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡು ಇತರರಿಗೆ ಸ್ಪೂರ್ತಿಯ ಸೆಲೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ದಾವಣಗೆರೆ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಸಾರ್ಥಕ 75 ಸಂವತ್ಸರಗಳನ್ನು ಪೂರೈಸಿ `ಅಮೃತ ಪುರುಷ’ ಎನ್ನುವ ಹೆಗ್ಗಳಿಕೆಗೆ ಭಾಜನರಾಗುತ್ತಿದ್ದಾರೆ.

ದಿನಾಂಕ 18.01.1950 ರಂದು ದಾವಣಗೆರೆ ತಾಲ್ಲೂಕಿನ ಹಿರೇತೊಗಲೇರಿ ಗ್ರಾಮದ ಶ್ರೀಮತಿ ಗಂಗಮ್ಮ ಮತ್ತು ಬಿ.ಬಸಪ್ಪ ದಂಪತಿಗಳ ಸುಪುತ್ರನಾಗಿ ಜನಿಸಿದ  ವಾಮದೇವಪ್ಪ ಅವರು, ಸಿರಿಗೆರೆ ವಿದ್ಯಾಸಂಸ್ಥೆ ಯಲ್ಲಿ ಸುದೀರ್ಘವಾಗಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದ ಕೆಲಸ, ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಎಂದೊಡನೇ ಈ 75 ರ ಮಾಗಿದ ಜೀವ 25 ರ ನವ ಯುವಕನಂತಾಗಿಬಿಡುತ್ತಾರೆ. 

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮೂರು ವರ್ಷ ಕಳೆಯುವಷ್ಟರಲ್ಲಿ 4 ಜಿಲ್ಲಾ ಸಮ್ಮೇಳನಗಳನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ ಅರ್ಥಪೂರ್ಣವಾಗಿ ಆಯೋಜಿಸುವ ಮೂಲಕ ತಾನೊಬ್ಬ ಸಮರ್ಥ ಅಧ್ಯಕ್ಷ ಎಂದು ಸಾಬೀತುಪಡಿಸಿದ್ದಾರೆ. ಈ ಅವಧಿಯಲ್ಲಿ ಇವರ ಮಾರ್ಗದರ್ಶನದಲ್ಲಿ 7 ತಾಲ್ಲೂಕು ಸಮ್ಮೇಳನಗಳು ನಡೆದಿವೆ ಎಂದರೆ ಇವರ ಸಂಘಟನಾ ಸಾಮರ್ಥ್ಯ ಎಂಥವರಿಗೂ ಅರ್ಥವಾಗುತ್ತದೆ. 

ಆತ್ಮೀಯ ವಲಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳ ಸರದಾರ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಅವರು, ಜನಾನುರಾಗಿ ಮತ್ತು ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಕಂಕಣ ಬದ್ಧರಾಗಿ ಕೆಲಸ ಮಾಡುವ  ಸಾತ್ವಿಕ ಮನಸ್ಸಿನವರು. ಪ್ರತಿಷ್ಠಿತ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಗಾದಿಯನ್ನು ಅಲಂಕರಿಸಿದ್ದರೂ ಅದೊಂದು ಕನ್ನಡದ ಕೆಲಸ ಮಾಡಲು ಸಿಕ್ಕಿರುವ ಸುವರ್ಣಾವಕಾಶ ಎಂದು ಭಾವಿಸಿ ವಿನೀತರಾಗಿ ಕೆಲಸ ಮಾಡುತ್ತಿದ್ದಾರೆ. ಎಂದೂ ಸಹ ತಮ್ಮ ಸರಳ, ಸಜ್ಜನಿಕೆ,  ಸೃಜನಶೀಲತೆಯನ್ನು ಬಿಟ್ಟುಕೊಟ್ಟವರಲ್ಲ. ಅತ್ಯಂತ  ಕ್ರಿಯಾಶೀಲರಾಗಿ ಸಾಹಿತ್ಯ ಪರಿಷತ್ತನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಅವರೀಗ ಅಮೃತ ಪುರುಷರಾಗಿದ್ದಾರೆ. ಅವರು ಇನ್ನಷ್ಟು ಕನ್ನಡದ ಕೆಲಸ ಮಾಡುವ ಅವಕಾಶವನ್ನು ಕನ್ನಡ ತಾಯಿ ಭುವನೇಶ್ವರಿಯು ಕರುಣಿಸಲಿ ಎನ್ನುವುದೇ ಅವರ ಶಿಷ್ಯ ವರ್ಗ ಮತ್ತು ಅಭಿಮಾನಿಗಳ ಆಶಯ.

– ಕೆ‌.ರಾಘವೇಂದ್ರ ನಾಯರಿ

ಗೌರವ ಕೋಶಾಧ್ಯಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದಾವಣಗೆರೆ.

error: Content is protected !!