ಚಿಕ್‌ಪಿ ಮ್ಯಾಜಿಕ್ ಬಳಕೆಯ ಮುಂಚೂಣಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಡಾ.ಟಿ.ಜಿ. ಅವಿನಾಶ್
ಜಗಳೂರು, ಜ.8- ಕಡಲೆ ಬೆಳೆಗಳಲ್ಲಿ ಕೀಟಗಳ ನಿರ್ವಹಣೆಗೆ ಜೈವಿಕ ತಂತ್ರಜ್ಞಾನ ಬಳಸುವುದು ಸೂಕ್ತ ಎಂದು ಸಸ್ಯ ಸಂರಕ್ಷಣಾ ತಜ್ಞ ಡಾ.ಟಿ.ಜಿ. ಅವಿನಾಶ್ ತಿಳಿಸಿದರು.
ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದ ತಾಕುಗಳಲ್ಲಿನ ಕಡಲೆ ಬೆಳೆಯಲ್ಲಿ ಚಿಕ್‌ಪಿ ಮ್ಯಾಜಿಕ್ ಬಳಕೆಯ ಮುಂಚೂಣಿ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್ ಮಾತನಾಡಿ, ನವೀನ ತಾಂತ್ರಿಕಗಳಾದ ಜೈವಿಕ ಗೊಬ್ಬರಗಳ ಬೀಜೋಪಚಾರ, ಮೋಹಕ ಬಲೆಗಳ ಬಳಕೆ ಹಾಗೂ ಚಿಕ್‌ಪಿ ಮ್ಯಾಜಿಕ್ ಬಳಕೆಯಿಂದಾಗಿ ಅಧಿಕ ಇಳುವರಿ ಪಡೆಯಬಹುದು ಎಂದರು.
ಪ್ರಗತಿಪರ ಕೃಷಿಕ ಚಂದ್ರಪ್ಪ ಮಾತನಾಡಿ, ಹೂವು ಬಿಡುವ ಸಮಯದಲ್ಲಿ ಮಳೆ ಬಂದಿರುವುದರಿಂದ ಕಾಯಿಗಳ ಸಂಖ್ಯೆ ಕಡಿಮೆಯಾಗಿದೆ, ಬೇರೆಯವರ ತಾಕುಗಳಿಗೆ ಹೋಲಿಸಿದರೆ ಪ್ರಾತ್ಯಕ್ಷಿಕೆಯ ತಾಕುಗಳಲ್ಲಿ ಕಾಯಿ ಉದುರುವಿಕೆ ಕಡಿಮೆ ಇದೆ ಎಂದರು.
ಹೂವಾದ ಸಮಯದಲ್ಲಿ ಚಿಕ್‌ಪಿ ಮ್ಯಾಜಿಕ್ ಬಳಕೆಯಿಂದ ಉದುರುವಿಕೆ ಕಡಿಮೆಗೊಂಡು ಕಾಯಿಗಳ ಸಂಖ್ಯೆ ಜಾಸ್ತಿಯಾಗಿ ಇಳುವರಿ ಹೆಚ್ಚು ಪಡೆಯುತ್ತೇವೆ ಎಂದು ಪ್ರಗತಿಪರ ಕೃಷಿಕ ಶಶಿಧರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನಿ ಜೆ. ರಘುರಾಜ್, ಪ್ರಗತಿಪರ ಕೃಷಿಕ ಕೃಷ್ಣಮೂರ್ತಿ, ಮೇಘರಾಜ್ ಹಾಗೂ ರೈತರಿದ್ದರು.