ಸಂಖ್ಯಾಶಾಸ್ತ್ರ, ಲೊಶು ಗ್ರಿಡ್ ಉಚಿತ ಕಾರ್ಯಾಗಾರದಲ್ಲಿ ಸಿ.ಕೆ. ಆನಂದ ತೀರ್ಥಾಚಾರ್
ದಾವಣಗೆರೆ, ಡಿ. 29 – ನಗರದ ಶ್ರೀ ಭಾಸ್ಕರಾ ಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದಿಂದ ನಿಜಲಿಂಗಪ್ಪ ಬಡಾವಣೆಯ ಅಮೃತ ವಿದ್ಯಾಲಯದಲ್ಲಿ ಭಾನುವಾರ ಸಂಖ್ಯಾಶಾಸ್ತ್ರ ಮತ್ತು ಲೊಶು ಗ್ರಿಡ್ ಉಚಿತ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರ ನಡೆಸಿಕೊಟ್ಟ ಸಿ.ಕೆ. ಆನಂದ ತೀರ್ಥಾಚಾರ್ ಮಾತನಾಡಿ, ಜೋತಿಷ್ಯ ಶಾಸ್ತ್ರದ ವ್ಯಾಪ್ತಿ ವಿಶಾಲವಾಗಿದೆ. ನಿಖರ ಜನ್ಮ ವೇಳೆಯಿಂದ ವ್ಯಕ್ತಿಯ ಸಂಪೂರ್ಣ ಇತಿಹಾಸ ಮತ್ತು ಭವಿಷ್ಯವನ್ನು ಕರಾರುವಾಕ್ಕಾಗಿ ನುಡಿಯಬಹುದು ಎಂದು ಹೇಳಿದರು.
ಹಸ್ತಸಾಮುದ್ರಿಕ, ಕುಂಡಲಿ, ಸಂಖ್ಯಾಶಾಸ್ತ್ರ, ವೀಳ್ಯದೆಲೆ, ಶಕುನ, ಅಷ್ಟಮಂಗಳ ಹೀಗೆ 18 ವಿಧಗಳಿಂದ ಭವಿಷ್ಯ ಹೇಳಬಹುದಾಗಿದೆ. ಕುಂಡಲಿಗೆ ಪೂರಕವಾಗಿ ಸಂಖ್ಯಾಶಾಸ್ತ್ರ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿದರು.
ಸಂಖ್ಯಾ ಶಾಸ್ತ್ರ ಅಂಕಿ – ಸಂಖ್ಯೆಗಳ ಆಟ. ಕೆಲವು ನಮ್ಮ ಜನುಮ ದಿನಕ್ಕೆ ಪೂರಕವಾದರೆ ಇನ್ನು ಕೆಲವು ಕೆಡುಕು ಉಂಟು ಮಾಡುತ್ತವೆ. ಇದನ್ನು ನೋಡಿಕೊಂಡು ಕೆಲ ಪರಿಹಾರ ಮಾಡಿಕೊಳ್ಳುವ ಮೂಲಕ ಜೀವನವನ್ನು ಸುಖಮಯ ಮಾಡಿಕೊಳ್ಳ ಬಹುದು ಎಂದು ಕಿವಿಮಾತು ಹೇಳಿದರು.
1 ರಿಂದ 9 ಸಂಖ್ಯೆಗಳನ್ನು ಒಳಗೊಂಡ ಚೌಕ ಬಳಸಿಕೊಂಡು ಭವಿಷ್ಯ ಹೇಳುವ ತಂತ್ರ ಚೈನಾದ ಲೋಶು ಗ್ರಿಡ್ ಜನಪ್ರಿಯವಾಗುತ್ತಿದೆ. ಇದನ್ನೂ ಜೋತಿಷ್ಯ ಶಾಸ್ತ್ರದಲ್ಲಿ ಪೂರಕವಾಗಿ ಬಳಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಖ್ಯಾ ಶಾಸ್ತ್ರವನ್ನು ಬಳಸಿಕೊಂಡು ವ್ಯಕ್ತಿಯ ವ್ಯಕ್ತಿತ್ವ ಮತ್ತು ಭವಿಷ್ಯ ನುಡಿಯುವ ರೀತಿ, ಲೋಶು ಗ್ರಿಡ್ ಬಳಸುವ ಬಗೆ, ನಮಗೆ ಒಳಿತಾಗುವ ಮೊಬೈಲ್ ಹಾಗೂ ವಾಹನಗಳ ಸಂಖ್ಯೆಗಳು ಇವುಗಳ ಮೇಲೆ ಉದಾಹಣೆಗಳೊಂದಿಗೆ ಬೆಳಕು ಚಲ್ಲಿದರು.
ಶಿಕ್ಷಕ ಮಂಜುನಾಥ್, ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನದ ಪ್ರಾಂಶುಪಾಲ ಪ್ರವೀಣ ಕುಮಾರ್ ಆರ್.ಬಿ. ಹಾಗೂ ಶಿಬಿರಾರ್ಥಿ ಗಳು, ಪ್ರಾಂಶುಪಾಲರು ಉಪಸ್ಥಿತರಿದ್ದರು.