ದಾವಣಗೆರೆ, ಡಿ.4- ನಗರದ ಲ್ಲಿರುವ ಕರ್ನಾಟಕ ಹಿಮೋಫಿಲಿಯಾ ಸೊಸೈಟಿಯ ಸಂಸ್ಥಾಪಕ ಡಾ. ಸುರೇಶ್ ಹನಗವಾಡಿ ಅವರು ಜೆ.ಜೆ.ಎಂ.ಮೆಡಿ ಕಲ್ ಕಾಲೇಜಿನ ಪೆಥಾಲಜಿ ವಿಭಾಗದ ಪ್ರಾಧ್ಯಾಪಕರಾಗಿದ್ದು, ಸ್ವತಃ ತಾವೇ ಹಿಮೊಫಿಲಿಯಾ ಬಾಧಿತರಾಗಿದ್ದಾರೆ.
ಡಾ. ಸುರೇಶ್ ಹನಗವಾಡಿ ಅವರು, ಹಿಮೊಫಿಲಿಯಾ, ಥಲಸ್ಸೇಮಿಯಾ ಮತ್ತು ಇತರೆ ವಿರಳ ರಕ್ತ ರೋಗಗಳ ಬಗ್ಗೆ ಕಳೆದ 35 ವರ್ಷಗಳಿಂದ ಅಧ್ಯಯನ ಮಾಡಿ ದೇಶ್ಯಾದಂತ ಸಂಚರಿಸಿ ರೋಗಿಗಳ ಕಷ್ಟಕಾರ್ಪಣ್ಯ ಆಲಿಸಿ ದುಬಾರಿ ಚಿಕಿತ್ಸೆಯನ್ನು ಸರ್ಕಾರದಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ಪೂರೈಕೆಯಾಗುವಂತೆ ಹೋರಾಟ ಮಾಡಿ ಯಶಸ್ಸು ಕಂಡಿದ್ದಾರೆ.
ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಪಾತ್ರ : ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಮಹಾಪೋಷಕರಾಗಿದ್ದ ಡಾ. ಎಸ್.ಪಿ. ಬಾಲಸುಬ್ರಮಣ್ಯಂ ಅವರು ಹಿಮೊಫಿಲಿಯಾ ಬಾಧಿತರ ನೋವನ್ನು ಬಹಳ ಹತ್ತಿರದಿಂದ ನೋಡಿದವರು, ರೋಗಿಗಳ ಕಣ್ಣೀರನ್ನು ಒರೆಸುವ ಸಲುವಾಗಿ ದಾವಣಗೆರೆ ನಗರದಲ್ಲಿ ವರ್ಷಕ್ಕೆ ಒಂದು ಸಂಗೀತ ಕಾರ್ಯಕ್ರಮವನ್ನು ತಮ್ಮ ತಂಡದೊಂದಿಗೆ ಆಗಮಿಸಿ ಆಯೋಜನೆ ಮಾಡುತ್ತಿದ್ದರು. ಇದರಲ್ಲಿ ಸಂಗ್ರಹವಾದ ಹಣವನ್ನು ರೋಗಿಗಳ ಕಲ್ಯಾಣಕ್ಕಾಗಿ ಬಳಸಲಾಗುತ್ತಿತ್ತು.
ದೇಶದಲ್ಲಿಯೇ ಉತ್ತಮ ಚಿಕಿತ್ಸಾ ಕೇಂದ್ರ : ಹಿಮೊಫಿಲಿಯಾ ರೋಗವು ಒಂದು ಅನುವಂಶಿಕ ಖಾಯಿಲೆಯಾಗಿದ್ದು, ವಿರಳ ಹಾಗೂ ದುಬಾರಿ ವೆಚ್ಚದ ರೋಗವಾಗಿದೆ. ನಗರದ ಹಿಮೋಫಿಲಿಯಾ ಸೊಸೈಟಿಯ ಚಿಕಿತ್ಸಾ ಕೇಂದ್ರವು ಕರ್ನಾಟಕವಲ್ಲದೆ ಹೊರ ರಾಜ್ಯಗಳ ರೋಗಿಗಳಿಗೆ ಒಂದೇ ಸೂರಿನಡಿ ಎಲ್ಲಾ ಚಿಕಿತ್ಸೆಯನ್ನು ನೀಡುತ್ತಾ ಬರುತ್ತಿದೆ.
ರಕ್ತ ರೋಗಿಗಳಿಗೆ ಸುಸಜ್ಜಿತ ಪ್ರಯೋಗಲಯ, ಬ್ಲಡ್ ಬ್ಯಾಂಕ್ ಹಾಗೂ ಹಿಮೊಫಿಲಿಯಾ ಬಾಧಿತರು ಮತ್ತು ಪೋಷಕರಿಗೆ ಉಚಿತ ವಸತಿ, ಊಟವನ್ನು ಕಲ್ಪಿಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷರು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಡಾ. ಸುರೇಶ ಹನಗವಾಡಿ ತಿಳಿಸಿದರು.
ನಮ್ಮ ಸಂಸ್ಥೆ ಕೇವಲ ಹಿಮೊಫಿಲಿಯಾ ನ್ಯೂನ್ಯತೆಗೆ ಅಷ್ಟೇ ಅಲ್ಲದೇ, ಎಲ್ಲಾ ರಕ್ತ ರೋಗಿಗಳಿಗೆ ಚಿಕಿತ್ಸೆ ನೀಡುವ ಆಶ್ರಯ ತಾಣವನ್ನಾಗಿ ಮಾರ್ಪಡಿಸಲಾಗುತ್ತಿದೆ. ಇದಕ್ಕೆ ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಡಾ|| ಸುರೇಶ ಹನಗವಾಡಿ ತಿಳಿಸಿದರು.
ಭಾರತ ಸರ್ಕಾರವು ಈ ಅನನ್ಯ ಸೇವೆಯನ್ನು ಪರಿಗಣಿಸಿ 2024-25ನೇ ಸಾಲಿನ `ಶ್ರೇಷ್ಟ ದಿವ್ಯಾಂಗನ’ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ವಿಕಲಚೇತನರ ದಿನಾಚರಣೆಯಾದ ಡಿಸೆಂಬರ್ 3 ರಂದು ನವದೆಹಲಿಯಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮ ಪ್ರಶಸ್ತಿ ನೀಡಿ ಪುರಸ್ಕರಿಸಿದರು.
ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಅವರು, `ರಕ್ತದಲ್ಲಿ ಅಡಕವಾ ಗಿರುವ ಅಂಗವೈಕಲ್ಯ’ದ ಬಗ್ಗೆ ಜಾಗೃತಿ ಮೂಡಿಸಿದ್ದರಲ್ಲದೇ ವಿಕಲಚೇತನರ ಯೋಜನೆಗಳಿಗೆ ನೀತಿ ನಿಯಮಗಳನ್ನು ತರಲು ಸರ್ಕಾರದೊಂದಿಗೆ ಕೈ ಜೋಡಿಸಿದ್ದಾರೆ.