ಶಾಲೆಗೆ ಟಿವಿ ವಿತರಿಸಿದ ಭಾರತ ವಿಕಾಸ ಪರಿಷತ್
ದಾವಣಗೆರೆ, ನ.24- ಶಾಲೆಗಳಲ್ಲಿ ಮಕ್ಕಳಿಗೆ ಪಾಠಗಳನ್ನು ಬಾಯಲ್ಲಿ ಹೇಳುವುದು ಪಾರಂಪರಿಕ ವಿಧಾನವಾಗಿದ್ದು, ಇದಕ್ಕೆ ಪೂರಕವಾಗಿ ದೃಶ್ಯಗಳನ್ನೂ ತೋರಿಸಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇದಕ್ಕಾಗಿ ಆಧುನಿಕ ದೃಶ್ಯ ಸಾಧನಗಳ ಬಳಕೆ ಅವಶ್ಯ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಹೇಳಿದರು.
ಭಾರತ ವಿಕಾಸ ಪರಿಷತ್ತಿನ ದಾವಣಗೆರೆ ಗೌತಮ ಶಾಖೆಯ ವತಿಯಿಂದ ನಗರದ ಹಳ್ಳಿ ಮಹಾದೇವಪ್ಪ ಶಾಲೆಗೆ ಸ್ಮಾರ್ಟ್ ಟಿವಿ ಪ್ರದಾನ ಮಾಡುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತದಲ್ಲಿ ಒಟ್ಟು ಸುಮಾರು 29 ಕೋಟಿ 80 ಲಕ್ಷ ಮನೆಗಳಿದ್ದು, 19 ಕೋಟಿ 70 ಲಕ್ಷದಷ್ಟು ಟಿವಿ ಸೆಟ್‌ಗಳಿವೆ. ಬಹುತೇಕ ಇವೆಲ್ಲವೂ ಮನರಂಜನೆಗಾಗಿಯೇ ಬಳಕೆಯಾಗುತ್ತಿವೆ. ಆದರೆ, ಶಾಲೆಗಳಲ್ಲಿ ಸ್ಮಾರ್ಟ್ ಟಿವಿಯನ್ನು ಬಳಸಿ ಮಕ್ಕಳಿಗೆ ಪಠ್ಯಕ್ಕೆ ಪೂರಕವಾದ ದೃಶ್ಯಗಳನ್ನು ತೋರಿಸುತ್ತಾ ಪಾಠ ಮಾಡಿದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವುದರ ಜೊತೆಗೆ ರಂಜನೆಯೂ ಇರುತ್ತದೆ ಎಂದರು. ನಮ್ಮ ದೇಶದಲ್ಲಿ 1959ರ ವೇಳೆಗೆ ಮೊದಲ ಟಿವಿ ಪ್ರಸಾರ ಆರಂಭವಾಗಿದ್ದು, 1961ರ ವೇಳೆಗೆ `ಸ್ಕೂಲ್ ಎಜುಕೇಶನಲ್ ಟಿವಿ ಪ್ರಾಜೆಕ್ಟ್’ ಅಂದರೆ ಶಾಲಾ ಶಿಕ್ಷಣದಲ್ಲಿ ಟಿವಿ ಬಳಕೆ ಯೋಜನೆ ಜಾರಿಗೆ ಬಂದಿತ್ತು. ಆದರೆ, ಈಗಿನ ಸ್ಮಾರ್ಟ್ ಟಿವಿಗಳು ಇದಕ್ಕೆ ಅತ್ಯಂತ ಯೋಗ್ಯವಾಗಿವೆ. ಇದರ ಸದ್ಬಳಕೆ ಆಗಬೇಕು ಎಂದರು.
ಭಾರತ ವಿಕಾಸ ಪರಿಷತ್ ಗೌತಮ ಶಾಖೆಯ ಅಧ್ಯಕ್ಷ ಎ.ಎಸ್.ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಪರಿಷತ್ತಿನ ದಕ್ಷಿಣ ವಲಯ ಸಹಕಾರ್ಯದರ್ಶಿ ಅರುಣ್ ಜೆ. ಘಾಟ್ಗೆ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದಾನಿ ಜಯಪ್ರಕಾಶ್ ಮಾಗಿ, ಪರಿಷತ್ತಿನ ಟಿ.ಎಸ್.ಜಯರುದ್ರೇಶ್, ಹಿರಿಯ ಸಮಾಜ ಸೇವಕ ಕೆ.ಬಿ.ಶಂಕರನಾರಾಯಣ, ಪರಿಷತ್ತಿನ ಕೋಶಾಧ್ಯಕ್ಷೆ ವೀಣಾ ಎಂ.ಜಿ, ಪುಟ್ಟಪ್ಪ ಕಾಶಪ್ಪ, ವಿಜಯೇಂದ್ರ, ಶಂಭುಲಿಂಗಪ್ಪ ಮುಂತಾದವರು ಉಪಸ್ಥಿತರಿದ್ದರು.
ಡಾ.ಆರತಿ ಸುಂದರೇಶ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಭವಾನಿ ಶಂಭುಲಿಂಗಪ್ಪ, ಶೀಲಾ ನಾಯಕ್ ಹಾಡಿದರು. ಸ್ವಾಗತವನ್ನು ಪರಿಷತ್ತಿನ ಕಾರ್ಯದರ್ಶಿ ಎಂ.ಆರ್.ಮಧುಕರ್ ಕೋರಿದರು. ಬಸವರಾಜ್ ವಂದನೆ ಸಮರ್ಪಿಸಿದರು.